ಮುಂಬೈ, ಜು 14 (DaijiworldNews/DB): ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಸದ್ಯ ಕಳಪೆ ಪ್ರದರ್ಶನದಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಸದ್ಯ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಸರಣಿಯಲ್ಲಿಯೂ ಹೇಳಿಕೊಳ್ಳುವಂತಹ ಸಾಧನೆ ಕೊಹ್ಲಿ ಕಡೆಯಿಂದ ಬಂದಿಲ್ಲ.
ಬಾಂಗ್ಲಾ ವಿರುದ್ದ 2019ರಲ್ಲಿ ಸಿಡಿಸಿದ ಶತಕವೇ ಕೊನೆಯದ್ದು. ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕೊಹ್ಲಿ ಬ್ಯಾಟ್ನಿಂದ ಶತಕವಾಗಲೀ, ಉತ್ತಮ ಆಟವಾಗಲೀ ಬಂದಿಲ್ಲ. ದೊಡ್ಡ ಇನ್ನಿಂಗ್ಸ್ ಆನಂತರ ಕೊಹ್ಲಿಯಿಂದ ಸಾಧ್ಯವೇ ಆಗಿಲ್ಲ. ಈ ನಡುವೆ ಕೊಹ್ಲಿ ಕಳಪೆ ಪ್ರದರ್ಶನಕ್ಕೆ ಕಪಿಲ್ ದೇವ್, ವೆಂಕಟೇಶ್ ಪ್ರಸಾದ್ರಂತಹ ಹಿರಿಯ ಆಟಗಾರರೂ ಗರಂ ಆಗಿದ್ದಾರೆ. ಟಿ20 ಪಂದ್ಯಗಳಿಂದ ಕೊಹ್ಲಿಯವರನ್ನು ಕೈ ಬಿಡಬೇಕು ಎಂಬ ಒತ್ತಾಯವನ್ನೂ ಈ ಹಿರಿಯ ಆಟಗಾರರು ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕೊಹ್ಲಿ ಆಟದ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿದ್ದಾರೆ.
ವಿರಾಟ್ ಕೊಹ್ಲಿ ಅವರ ಸಾಮರ್ಥ್ಯ ಮತ್ತು ಅವರ ಆಟದ ಗತ್ತು ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಗಳಿಸಿರುವ ರನ್ಗಳೇ ಬಿಂಬಿಸಿದ್ದವು. ಅವರೊಬ್ಬ ಉತ್ತಮ ಮತ್ತು ಭರವಸೆಯ ಆಟಗಾರ. ಆದರೆ ಈಗ ವೃತ್ತಿಪರ ಆಟಗಾರನಾಗಿ ಅವರು ತುಂಬಾ ಕಠಿಣವಾದ ಸಮಯವನ್ನು ಎದುರಿಸುತ್ತಿದ್ದಾರೆ. ಬಹುಶಃ ಈ ವಿಚಾರ ಸ್ವತಃ ಕೊಹ್ಲಿ ಅವರಿಗೂ ಗೊತ್ತಿದೆ. ವಿರಾಟ್ ಕೊಹ್ಲಿ ತಮ್ಮ ಆಟದ ಸಾಮರ್ಥ್ಯವನ್ನು ಮರಳಿ ಪಡೆಯಬೇಕಾದರೆ ಇನ್ನಷ್ಟು ಪರಿಶ್ರಮ ಪಡಬೇಕಾಗುತ್ತದೆ. ಆ ಪರಿಶ್ರಮದ ಕಠಿಣ ಹಾದಿಯನ್ನು ಅವರೇ ಅನುಸರಿಸಿ ತಮ್ಮ ವೃತ್ತಿ ಶ್ರೇಷ್ಠತೆಯೆಡೆಗೆ ಮರಳುವುದು ಅವರಿಗೆ ಸದ್ಯದ ಬೆಳವಣಿಗೆಯಲ್ಲಿ ಅನಿವಾರ್ಯ ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.