ಢಾಕಾ, ಜು 17 (DaijiworldNews/DB): ಬಾಂಗ್ಲಾದೇಶದ ಹಿರಿಯ ಆಟಗಾರ ತಮೀಮ್ ಇಕ್ಬಾಲ್ ಅವರು ಅಂತಾರಾಷ್ಟ್ರೀಯ ಟಿ20 ಮಾದರಿಯ ಕ್ರಿಕೆಟ್ಗೆ ರಾಜೀನಾಮೆ ಘೋಷಿಸಿದ್ದಾರೆ.
ಹಿರಿಯ ಆಟಗಾರ ಹಾಗೂ ಏಕದಿನ ತಂಡದ ನಾಯಕರಾಗಿರುವ 33 ವರ್ಷದ ತಮೀಮ್ ಅವರು, ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ಮುಗಿದ ಬಳಿಕ ತಮ್ಮ ಅಧಿಕೃತ ಫೇಸ್ಬುಕ್ ಖಾತೆಯ ಮೂಲಕ ರಾಜೀನಾಮೆ ನಿರ್ಧಾರವನ್ನು ಘೋಷಣೆ ಮಾಡಿದರು. ಈ ಪಂದ್ಯದಲ್ಲಿ ಅವರು ವೆಸ್ಟ್ ಇಂಡೀಸ್ ತಂಡವನ್ನು ನಾಲ್ಕು ವಿಕೆಟ್ಗಳಿಂದ ಸೋಲಿಸಿದ್ದರು.
ನಿವೃತ್ತಿ ಕುರಿತು ಬರೆದುಕೊಂಡಿರುವ ಅವರು, ಟಿ20 ಮಾದರಿಯ ಕ್ರಿಕೆಟ್ಗೆ ಇಂದಿನಿಂದ ವಿದಾಯ ಹೇಳುತ್ತಿದ್ದೇನೆ. ಇಲ್ಲಿವರೆಗೆ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.
2020ರ ಮಾರ್ಚ್ ನಲ್ಲಿ ಆಡಿದ ಟಿ20 ಪಂದ್ಯ ಅವರ ಕೊನೆಯ ಪಂದ್ಯವಾಗಿತ್ತು. ಬಳಿಕ ಗಾಯ ಹಾಗೂ ಇತರ ಕಾರಣಗಳಿಂದಾಗಿ ಇದರಿಂದ ದೂರ ಉಳಿದಿದ್ದರು. ಬಾಂಗ್ಲಾ ಪರ ಒಟ್ಟು 78 ಟಿ20 ಪಂದ್ಯಗಳನ್ನು ತಮೀಮ್ ಆಡಿದ್ದಾರೆ. ಆ ಮೂಲಕ ಒಟ್ಟು 1758 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು ಏಳು ಅರ್ಧ ಶತಕಗಳನ್ನು ಬಾರಿಸಿದ ಹೆಗ್ಗಳಿಕೆ ಅವರದು. ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಶತಕ ಬಾರಿಸಿದ ಬಂಗ್ಲಾದೇಶದ ಏಕೈಕ ಬ್ಯಾಟರ್ ಎಂಬುದಾಗಿಯೂ ಅವರು ಗುರುತಿಸಿಕೊಂಡಿದ್ದಾರೆ.