ನವದೆಹಲಿ, ಜು 20 (DaijiworldNews/MS): ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್ಗಾಗಿ ನಡೆಸಲಾಗುತ್ತಿರುವ ಡೋಪಿಂಗ್ ಪರೀಕ್ಷೆಯಲ್ಲಿ ಅಗ್ರ ಓಟಗಾರ್ತಿ ಎಸ್.ಧನಲಕ್ಷ್ಮಿ, ರಾಷ್ಟ್ರೀಯ ದಾಖಲೆ ರಚಿಸಿದ ಟ್ರಿಪಲ್ ಜಂಪರ್ ಐಶ್ವರ್ಯಾ ಬಾಬು ವಿಫಲರಾಗಿದ್ದು ಕಾಮನ್ವೆಲ್ತ್ ಗೇಮ್ಸ್ನಿಂದ ಹೊರಬಿದ್ದಿದ್ದಾರೆ.
ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ ಗಾಗಿ 36 ಸದಸ್ಯರ ಭಾರತೀಯ ಅಥ್ಲೆಟಿಕ್ಸ್ ತಂಡದಲ್ಲಿ ಸ್ಥಾನ ಪಡೆದಿರುವ 24 ವರ್ಷದ ಧನಲಕ್ಷ್ಮಿ, ವಿಶ್ವ ಅಥ್ಲೆಟಿಕ್ಸ್ನ ಅಥ್ಲೆಟಿಕ್ಸ್ ಇಂಟೆಗ್ರಿಟಿ ಯುನಿಟ್ (AIU) ವಿದೇಶದಲ್ಲಿ ನಡೆಸಿದ ಡೋಪ್ ಪರೀಕ್ಷೆಯಲ್ಲಿ ನಿಷೇಧಿತ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ.
ಕಳೆದ ತಿಂಗಳು ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಅಂತರ್ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ನಾಡಾ ಅಧಿಕಾರಿಗಳು 24 ವರ್ಷದ ಟ್ರಿಪಲ್ ಜಂಪರ್ ಐಶ್ವರ್ಯಾ ಬಾಬು ಅವರ ಸ್ಯಾಂಪಲ್ ಪಡೆದುಕೊಂಡಿದ್ದು, ಇವರು ಕೂಡಾ ಡೋಪ್ ಟೆಸ್ಟ್ ನಲ್ಲಿ ವಿಫಲರಾಗಿದ್ದಾರೆ.
ಅಮೆರಿಕದಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್ಶಿಪ್ಗೂ ಧನಲಕ್ಷ್ಮಿ ಆಯ್ಕೆಯಾಗಿದ್ದರು. ಆದರೆ ವೀಸಾ ಸಮಸ್ಯೆಗಳಿಂದಾಗಿ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ. ಇದೀಗ ಡೋಪಿಂಗ್ ನಲ್ಲಿ ವಿಫರಾಗಿರುವ ಅವರು , ಕಾಮನ್ವೆಲ್ತ್ನಿಂದಲೂ ಹೊರಬಿದ್ದಿದ್ದಾರೆ.