ನವದೆಹಲಿ, ಜು 21 (DaijiworldNews/DB): ಕ್ರಿಕೆಟ್ನಿಂದ ದೂರ ಉಳಿದ ಪತ್ನಿ, ಮಗಳ ಜೊತೆ ಪ್ಯಾರಿಸ್ ಟೂರ್ನಲ್ಲಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿ ಸಖತ್ ಡ್ಯಾನ್ಸ್ ಮಾಡಿ ಚಿಲ್ ಆಗಿದ್ದಾರೆ. ತಮ್ಮ ಡ್ಯಾನ್ಸ್ ವೀಡಿಯೋ/ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು ಮತ್ತೆ ಕಮ್ ಬ್ಯಾಕ್ ಮಾಡುತ್ತೇನೆಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದ್ದಾರೆ.
ಕಳೆದ ಎರಡ್ಮೂರು ವರ್ಷಗಳಿಂದ ಕಳಪೆ ಪ್ರದರ್ಶನದ ಮೂಲಕವೆ ಸುದ್ದಿಯಾಗುತ್ತಿದ್ದ ವಿರಾಟ್ ಕೊಹ್ಲಿ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಟೀಮ್ ಇಂಡಿಯಾದ ವೆಸ್ಟ್ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಯಿಂದಲೂ ದೂರವೇ ಉಳಿದುಕೊಂಡಿದ್ದಾರೆ. ಐಪಿಎಲ್ ಬಳಿಕ ದಕ್ಷಿಣ ಆಫ್ರಿಕಾ, ಐರ್ಲೆಂಡ್ ಸರಣಿಯಲ್ಲಿ ಅವರು ಆಡಿರಲಿಲ್ಲ. ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿಯೂ ಕಳಪೆ ಸಾಮರ್ಥ್ಯ ತೋರಿದ್ದರು. ಟಿ-20 ತಂಡದಿಂದ ಕೊಹ್ಲಿಯನ್ನು ಕೈ ಬಿಡಬೇಕು ಎಂಬ ಒತ್ತಾಯಗಳೂ ಜೋರಿದ್ದವು. ಆದರೆ ಇವೆಲ್ಲವನ್ನು ತಲೆಗೆ ಹಾಕಿಕೊಳ್ಳದ ವಿರಾಟ್ ಕೊಹ್ಲಿ ಸದ್ಯ ಪತ್ನಿ ಅನುಷ್ಕಾ ಶರ್ಮ ಮತ್ತು ಮಗಳು ವಾಮಿಕಾ ಜೊತೆ ಪ್ಯಾರಿಸ್ನಲ್ಲಿ ಕಾಲ ಕಳೆಯುತ್ತಿದ್ದಾರೆ. ಇದೀಗ ಅವರು ಸಾಮಾಜಿಕ ಜಾಲತಾಣದಲ್ಲಿ ತಾವು ರಿಲ್ಯಾಕ್ಸ್ ಮೂಡ್ನಲ್ಲಿ ಜೀವನವನ್ನು ಎಂಜಾಯ್ ಮಾಡುತ್ತಿರುವ ವೀಡಿಯೋವೊಂದನ್ನು ಶೇರ್ ಮಾಡಿದ್ದಾರೆ. ವೀಡಿಯೋದಲ್ಲಿ ಅವರು ಮಾಡಿರುವ ಡ್ಯಾನ್ಸ್ ನೋಡಿದಾಗ ತಾನಿನ್ನೂ ಫಿಟ್ ಆಗಿದ್ದು, ಶೀಘ್ರ ಕಮ್ ಬ್ಯಾಕ್ ಮಾಡುತ್ತೇನೆಂಬ ಸಂದೇಶವನ್ನು ರವಾನಿಸಿದಂತೆಯೇ ಕಾಣುತ್ತದೆ.
ಬಾಘಿ-2, ಜನಪ್ರಿಯ ಮುಂಡಿಯನ್ ಪಂಜಾಬಿ ಹಾಡಿಗೆ ಕೊಹ್ಲಿ ವ್ಯಾಯಮದ ಶೈಲಿಯಲ್ಲೇ ಡ್ಯಾನ್ಸ್ ಮಾಡಿದ್ದಾರೆ. ಕಳೆದ ಹಲವು ದಿನಗಳಿಂದ ಇದು ಬಾಕಿ ಉಳಿದಿತ್ತಾದರೂ ತಡವಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.