ನವದೆಹಲಿ, ಜು 26 (DaijiworldNews/DB): ಭಾರತ ಬಾಕ್ಸಿಂಗ್ ಫೆಡರೇಶನ್ (ಬಿಎಫ್ಐ) ತನಗೆ ಮಾನಸಿಕ ಕಿರುಕುಳ ನೀಡುತ್ತಿದೆ ಎಂದು ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್ ಅವರು ಭಾರೀ ಆರೋಪ ಮಾಡಿದ್ದಾರೆ.
ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಅವರು ತಯಾರಿ ನಡೆಸುತ್ತಿದ್ದಾರೆ. ಆದರೆ ಇದೇ ವೇಳೆ ಬಿಎಫ್ಐ ತನಗೆ ಮಾನಸಿಕ ಕಿರುಕುಳ ನೀಡುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದು ಅದನ್ನು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ನನ್ನ ಮೇಲೆ ಕಿರುಕುಳವಾಗುತ್ತಿರುವ ವಿಷಯವನ್ನು ಬಹಿರಂಗಪಡಿಸಲು ದುಃಖವಾಗುತ್ತಿದೆ. ನನಗೆ ಪದಕ ಗೆಲ್ಲಲು ಸಹಾಯ ಮಾಡಿದ ತರಬೇತುದಾರರನ್ನು ವಜಾಗೊಳಿಸಲಾಗಿರುವುದು ನನ್ನ ತರಬೇತಿ ಪ್ರಕ್ರಿಯೆಗೆ ತೊಡಕಾಗಿದೆ. ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ತರಬೇತುದಾರೆ ಸಂಧ್ಯಾ ಗುರುಂಗ್ಜಿ ಅವರನ್ನು ಸೇರಿಸಲು ಮನವಿ ಮಾಡಿದ ಬಳಿಕ ತಡವಾಗಿ ಸೇರಿಸಿಕೊಳ್ಳಲಾಗಿದೆ. ಶಿಬಿರಗಳಿಂದ ಸಾಕಷ್ಟು ಸಮಸ್ಯೆಗಳಾಗುತ್ತಿದ್ದು, ಮಾನಸಿಕ ಕಿರುಕುಳ ಎದುರಿಸುತ್ತಿದ್ದೇನೆ. ಅಲ್ಲದೆ ಕ್ರೀಡಾಕೂಟಕ್ಕೆ ಎಂಟು ದಿನ ಇರುವಾಗಲೇ ನನ್ನ ತರಬೇತಿಯನ್ನು ನಿಲ್ಲಿಸಲಾಗಿದ್ದು, ಮೊದಲ ತರಬೇತುದಾರರಿಗೆ ಪ್ರವೇಶ ನಿರಾಕರಣೆ, ಎರಡನೇ ತರಬೇತುದಾರರನ್ನು ಭಾರತಕ್ಕೆ ಕಳುಹಿಸಲಾಗಿದೆ. ಇದೇ ಕಾರಣದಿಂದ ನನ್ನ ವಿಶ್ವ ಚಾಂಪಿಯನ್ಶಿಪ್ಗಳಿಗೆ ತೊಡಕಾಗಿದೆ ಎಂದು ಆಪಾದಿಸಿದ್ದಾರೆ.
ಬಿಎಫ್ಐ ಏನೇ ರಾಜಕೀಯ ಮಾಡಿದರೂ ನಾನು ಕಾಮನ್ವೆಲ್ತ್ ಗೇಮ್ಸ್ನಲ್ಲಿ ನನ್ನ ಆಟ ನಿಷ್ಕ್ರಿಯವಾಗಲು ಬಿಡುವುದಿಲ್ಲ. ಯಾವುದೇ ಕಿರುಕುಳ ಎದುರಿಸಿ ನನ್ನ ದೇಶಕ್ಕಾಗಿ ಪದಕ ಜಯಿಸಬಲ್ಲೆ ಎಂದವರು ಬರೆದುಕೊಂಡಿದ್ದಾರೆ.
ಲೊವ್ಲಿನಾ ಆರೋಪಕ್ಕೆ ತತ್ಕ್ಷಣ ಸ್ಪಂದಿಸಿದರುವ ಕ್ರೀಡಾ ಸಚಿವಾಲಯವು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಲೊವ್ಲಿನಾ ಅವರ ಕೋಚ್ಗೆ ಮಾನ್ಯತೆ ನೀಡಲು ಶೀಘ್ರ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದೆ.