ನವದೆಹಲಿ, ಜು 27 (DaijiworldNews/DB): ಮುಂಬರುವಕಾಮನ್ವೆಲ್ತ್ ಗೇಮ್ಸ್ನ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗುವ ಅವಕಾಶ ಕಳೆದುಕೊಂಡಿರುವುದಕ್ಕೆ ತುಂಬಾ ನೋವಾಗುತ್ತಿದೆ ಎಂದು ಜಾವೆಲಿನ್ ಪಟು ನೀರಜ್ ಚೋಪ್ರಾ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಗಾಯದ ಸಮಸ್ಯೆಯಿಂದಾಗಿ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಲು ಸಾಧ್ಯವಾಗುತ್ತಿಲ್ಲ. ಮುಂದಿನ ಕೆಲ ವಾರಗಳ ತನಕ ವಿಶ್ರಾಂತಿಯಲ್ಲಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಈ ಬಗ್ಗೆ ತರಬೇತಿ ತಂಡದವರೊಂದಿಗೆ ಚರ್ಚಿಸಿ ನನ್ನ ಮುಂದಿನ ಕ್ರೀಡಾಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕಾಮನ್ವೆಲ್ತ್ ಗೇಮ್ಸ್ ಬಿಡುವುದೊಳ್ಳೆಯದೆಂದು ನಿರ್ಧರಿಸಲಾಗಿದೆ. ಆದರೆ ಈ ಬಗ್ಗೆ ತುಂಬಾ ವಿಷಾದವಿದೆ ಎಂದು ಬರೆದುಕೊಂಡಿದ್ದಾರೆ.
ಪ್ರೀತಿ ಮತ್ತು ಬೆಂಬಲದಿಂದ ನನ್ನನ್ನು ಮುನ್ನಡೆಸಿದ ದೇಶದ ಎಲ್ಲರಿಗೂ ಧನ್ಯವಾದ. ದೇಶದ ಅತ್ಲಿಟ್ಗಳನ್ನು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಹುರಿದುಂಬಿಸಲು ನಾವೆಲ್ಲರೂ ಸಿದ್ದರಾಗೋಣ ಎಂದು ಇದೇ ವೇಳೆ ಕ್ರೀಡಾಪ್ರೇಮಿಗಳಲ್ಲಿ ಅವರು ಮನವಿ ಮಾಡಿದ್ದಾರೆ.
ಒರೆಗನ್ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ ನೀರಜ್ ಚೋಪ್ರಾ 88.13 ಮೀಟರ್ ದೂರ ಜಾವೆಲಿನ್ ಎಸೆದು ಬೆಳ್ಳಿ ಪದಕ ಗೆದ್ದಿದ್ದರು. ಆದರೆ ಈ ವೇಳೆ ಅವರಿಗೆ ಗಾಯ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರು ಅವರಿಗೆ ವಿಶ್ರಾಂತಿಗೆ ಸಲಹೆ ನೀಡಿದ್ದರು.