ಚೆನ್ನೈ, ಜು 29 (DaijiworldNews/DB): ಕ್ರೀಡೆಯಲ್ಲಿ ಸೋತವರು ಯಾರಿಲ್ಲ. ಗೆದ್ದವರು ಮತ್ತು ಭವಿಷ್ಯದಲ್ಲಿ ಗೆಲುವು ಸಾಧಿಸುವವರು ಇರುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಚೆನ್ನೈಯಲ್ಲಿ ಎಫ್ಐಡಿಯ 44ನೇ ಚೆಸ್ ಒಲಿಂಪಿಯಾಡ್ನ್ನು ಅವರು ಉದ್ಘಾಟಿಸಿದರು. ಭಾರತದಲ್ಲಿ ಚೆಸ್ ಒಲಿಂಪಿಯಾಡ್ ಆಯೋಜನೆ ವಿಶೇಷತೆಯನ್ನು ಹೊಂದಿದೆ. ವಿಶೇಷ ಸಮಯವಾದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲೇ ಆಯೋಜನೆಗೊಳ್ಳುತ್ತಿರುವುದು ನಮ್ಮ ಹೆಮ್ಮೆ. ಕ್ರೀಡೆಯಲ್ಲಿ ಸೋಲು ಎಂಬುದಿಲ್ಲ. ಭವಿಷ್ಯದಲ್ಲಿ ಗೆಲುವಿನ ಮೆಟ್ಟಿಲುಗಳನ್ನು ಏರುತ್ತಾರೆ ಎಂದರು.
ಆತಿಥ್ಯ ವಹಿಸುವುದರಲ್ಲಿ ಭಾರತ ಯಾವಾಗಲೂ ಒಂದು ಹೆಜ್ಜೆ ಮುಂದು. ಚೆಸ್ ಪಂದ್ಯದ ಆತಿಥ್ಯವನ್ನು ಭಾರತದ ತಮಿಳುನಾಡಿನಲ್ಲಿ ವಹಿಸಿರುವುದು ಇನ್ನಷ್ಟು ಖುಷಿ ಕೊಟ್ಟಿದೆ. ಬಹಳ ಕಡಿಮೆ ಅವಧಿಯಲ್ಲಿ ಉತ್ತಮ ಆಯೋಜನೆ ಮಾಡುವ ಮೂಲಕ ಸಂಘಟಕರು ಭಾರತದ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ ಎಂದು ಶ್ಲಾಘಿಸಿದರು.
ತಮಿಳುನಾಡು ರಾಜ್ಯಪಾಲ ಆರ್. ಎನ್. ರವಿ, ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್, ಕೇಂದ್ರ ಸಚಿವ ಅನುರಾಗ್ ಠಾಕೂರ್, ಎಲ್. ಮುರುಗನ್ ಮತ್ತಿತರರು ಉಪಸ್ಥಿತರಿದ್ದರು. ಈ ವರ್ಷ ಉಕ್ರೇನ್ ನಲ್ಲಿ ನಡೆಯಬೇಕಾಗಿ ಚೆಸ್ ಒಲಿಂಪಿಯಾಡ್ ಸ್ಪರ್ಧೆಯು ರಷ್ಯಾ ದಾಳಿಯಿಂದಾಗಿ ಭಾರತದ ಚೆನ್ನೈನ ಮಾಮಲ್ಲಪುರಂನಲ್ಲಿ ಕ್ರೀಡಾಕೂಟ ನಡೆಯುತ್ತಿದೆ.