ಕುಂದಾಪುರ, ಜು 30 (DaijiworldNews/DB): ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ನಲ್ಲಿ ರಾಜ್ಯಕ್ಕೆ ಮೊದಲ ಪದಕ ಲಭಿಸಿದ್ದು, ಕುಂದಾಪುರದ ಗುರುರಾಜ್ ಪೂಜಾರಿ ಕಂಚಿನ ಪದಕ ಗೆದ್ದಿದ್ದಾರೆ.
ಶನಿವಾರ ನಡೆದ ವೇಟ್ಲಿಫ್ಟಿಂಗ್ 61 ಕೆ.ಜಿ. ವಿಭಾಗದಲ್ಲಿ ಗುರುರಾಜ್ ಕಂಚಿನ ಪದಕ ಗಳಿಸಿದರು. ಈ ವಿಭಾಗದಲ್ಲಿ ಚಿನ್ನದ ಪದಕ ಮಲೇಷಿಯಾದ ಮಹಮ್ಮದ್ ಅಜ್ನಿಲ್ ಬಿಡಿನ್ ಹಾಗೂ ಬೆಳ್ಳಿ ಪದಕ ಪಪುವ ನ್ಯೂಗಿನಿ ದೇಶದ ಮೊರಿಯಾ ಬಾರು ಅವರ ಪಾಲಾಯಿತು.
ಇದು ದೇಶಕ್ಕೆ ಸಿಕ್ಕಿದ ಎರಡನೇ ಪದಕವಾಗಿದೆ. ಇಂದು ಬೆಳಗ್ಗೆ ನಡೆದ ಸ್ಪರ್ಧೆಯಲ್ಲಿ ಭಾರತದ ಸಂಕೇತ್ ಸಾಗರ್ 55 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ಗುರುರಾಜ್ ಅವರು ಕುಂದಾಪುರ ತಾಲೂಕು ವಂಡ್ಸೆ ಗ್ರಾಮದ ಟ್ಯಾಕ್ಸಿ ಚಾಲಕ ಮಹಾಬಲ ಪೂಜಾರಿ- ಪದ್ದು ಪೂಜಾರಿ ದಂಪತಿ ಪುತ್ರ. ಆಸ್ಟ್ರೇಲಿಯಾ ಗೋಲ್ಡ್ ಕೋಸ್ಟ್ನಲ್ಲಿ ಕಳೆದ ಬಾರಿ ನಡೆದ ನಡೆದ 21ನೇ ಕಾಮನ್ವೆಲ್ತ್ ಗೇಮ್ಸ್ನಲ್ಲಿ 56 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿ ಅವರು ಬೆಳ್ಳಿ ಪದಕ ಗೆದ್ದು ಸಾಧನೆ ಮಾಡಿದ್ದರು. ಅಲ್ಲದೆ, ಉಜ್ಬೇಕಿಸ್ತಾನದಲ್ಲಿ ಕಳೆದ ವರ್ಷ ನಡೆದ ವಿಶ್ವ ಮಟ್ಟದ ಕಾಮನ್ವೆಲ್ತ್ ಚಾಂಪಿಯನ್ಶಿಪ್ ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದರು. ಪ್ರಸ್ತುತ ಗುರುರಾಜ್ ವಾಯುಸೇನೆ ಉದ್ಯೋಗಿಯಾಗಿದ್ದಾರೆ. ಇವರು ಏಕಲವ್ಯ ಪ್ರಶಸ್ತಿ ವಿಜೇತರು.
ಇನ್ನು ಗುರುರಾಜ್ ಪೂಜಾರಿ ಸಾಧನೆ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಅತ್ಯುತ್ತಮ ಪ್ರದರ್ಶನ ತೋರಿದ ಗುರುರಾಜ್ ಅವರಿಗೆ ಅಭಿನಂದನೆಗಳು. ಅವರ ಕ್ರೀಡಾ ಪಯಣದಲ್ಲಿ ಇನ್ನಷ್ಟು ಯಶಸ್ಸು ಸಿಗಲೆಂದು ನಾನು ಹಾರೈಸುತ್ತೇನೆ ಎಂದು ಮೋದಿ ತಿಳಿಸಿದ್ದಾರೆ.