ಬರ್ಮಿಂಗ್ ಹ್ಯಾಮ್, ಜು 30 (DaijiworldNews/SM): ಕಾಮನ್ವೆಲ್ತ್ ಗೇಮ್ಸ್ 2022 ಗುರುವಾರದಿಂದ ಪ್ರಾರಂಭವಾಗಿದ್ದು, ಭಾರತದ ಪದಕದ ಬೇಟೆ ಇಂದು ಆರಂಭಗೊಂಡಿದ್ದು, ಭಾರತ ಮೊದಲ ಸ್ವರ್ಣ ಗೆದ್ದುಕೊಂಡಿದೆ.
ಭಾರತ ಶನಿವಾರ ವೇಟ್ಲಿಫ್ಟಿಂಗ್ ನಲ್ಲಿ ಚಿನ್ನ ಸೇರಿದಂತೆ ಒಂದೇ ದಿನ ಮೂರು ಪದಕಗಳನ್ನು ಪಡೆದುಕೊಂಡಿದೆ. ಟೋಕಿಯೊ ಒಲಂಪಿಕ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ವೇಟ್ಲಿಫ್ಟರ್ ಮೀರಾಬಾಯಿ ಚಾನು ಅವರು ಕಾಮನ್ ವೆಲ್ತ್ ನಲ್ಲಿ ತಮ್ಮ ಬಲಿಷ್ಠ ಪ್ರದರ್ಶನದಿಂದಾಗಿ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ವೇಟ್ಲಿಫ್ಟಿಂಗ್ನ 49 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟಿದ್ದಾರೆ.
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತ ಇಂದು ಒಂದು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದೆ. ಇದರೊಂದಿಗೆ ಪದಕ ಪಟ್ಟಿಯಲ್ಲಿ ಭಾರತ 9ನೇ ಸ್ಥಾನದಲ್ಲಿದೆ. ವೇಟ್ ಲಿಫ್ಟರ್ ಸಂಕೇತ್ ಮಹದೇವ್ ಸಾಗರ್ ಅವರು 55 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. 61 ಕೆಜಿ ವಿಭಾಗದ ವೇಯ್ಟ್ ಲಿಫ್ಟಿಂಗ್ ನಲ್ಲಿ ಕನ್ನಡಿಗ ಗುರುರಾಜ ಪೂಜಾರಿ ಕಂಚಿನ ಪದಕ ಗೆದ್ದಿದ್ದಾರೆ.