ಬರ್ಮಿಂಗ್ಹ್ಯಾಮ್, ಜು 31 (DaijiworldNews/DB): ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಭೇಟೆ ಮುಂದುವರಿದಿದ್ದು, ಮತ್ತೊಂದು ಪದಕ ಭಾರತದ ಪಾಲಾಗಿದೆ. ವೇಟ್ ಲಿಫ್ಟಿಂಗ್ ನ 55 ಕೆಜಿ ವಿಭಾಗದಲ್ಲಿ ಭಾರತದ ಬಿಂದ್ಯಾ ರಾಣಿ ದೇವಿ ಬೆಳ್ಳಿ ಪದಕ ಜಯಿಸಿದ್ದಾರೆ.
ಬಿಂದ್ಯಾ ರಾಣಿಗಿದು ಮೊದಲ ಕಾಮನ್ವೆಲ್ತ್ ಗೇಮ್ಸ್ . 23 ವರ್ಷದ ಬಿಂದ್ಯಾರಾಣಿ ದೇವಿ 55 ಕೆಜಿ ವಿಭಾಗದಲ್ಲಿ ಒಟ್ಟು 202 ಕೆಜಿ ಎತ್ತುವ ಸ್ಪರ್ಧೆಯಲ್ಲಿ 116 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಅಲ್ಲದೆ, ಅತ್ಯಧಿಕ ‘ಕ್ಲೀನ್ ಮತ್ತು ಜರ್ಕ್’ ಲಿಫ್ಟ್ ಮಾಡಿ ಗೇಮ್ಸ್ ದಾಖಲೆಯನ್ನು ಮುರಿದ ಹೆಗ್ಗಳಿಕೆಗೂ ಪಾತ್ರರಾದರು.
ಬರ್ಮಿಂಗ್ಹ್ಯಾಮ್ನಲ್ಲಿ ಕಳೆದೆರಡು ದಿನಗಳ ಹಿಂದೆ ಆರಂಭವಾದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಈವರೆಗೆ ಭಾರತಕ್ಕೆ ನಾಲ್ಕು ಪದಕ ಲಭಿಸಿದೆ. ಮೀರಾಬಾಯಿ ಚಾನು ಚಿನ್ನದ ಪದಕ ಪಡೆದರೆ, ಸಂಕೇತ್ ಸರ್ಗರ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದರು. ಕರ್ನಾಟಕದ ಗುರುರಾಜ್ ಪೂಜಾರಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದರು. ಇದೀಗ ಬಿಂದ್ಯಾ ರಾಣಿ ಬೆಳ್ಳಿ ಪದಕ ಗೆದ್ದಿದ್ದಾರೆ.