ಬರ್ಮಿಂಗ್ಹ್ಯಾಮ್, ಜು 31 (DaijiworldNews/DB): ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಜೆರೆಮಿ ಲಾಲ್ರಿನ್ನುಂಗಾ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾರೆ. ಆ ಮೂಲಕ ಎರಡನೇ ದಿನದಾಂತ್ಯದ ವೇಳೆಗೆ ಎರಡು ಚಿನ್ನ ಸಹಿತ ಐದು ಪದಕ ಭಾರತದ ಪಾಲಾಗಿದೆ.
67 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ 300 ಕೆಜಿ ಭಾರ ಎತ್ತುವ ಮೂಲಕ 19 ವರ್ಷದ ಜೆರೆಮಿ ಲಾಲ್ರಿನ್ನುಂಗಾ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಅಲ್ಲದೆ 300 ಕೆಜಿ ಭಾರ ಎತ್ತುವ ಮೂಲಕ ಕಾಮನ್ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವೈಪವಾ ಅಯೋನೆ 93 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಹಾಗೂ ನೈಜೀರಿಯಾದ ಎಡಿಡಿಯಾಂಗ್ ಉಮೊಫಿಯಾ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡರು. ಕ್ಲೀನ್ ಅಂಡ್ ಜೆರ್ಕ್ ವಿಭಾಗದಲ್ಲಿ ಜೆರೆಮಿ ಬರೋಬ್ಬರಿ 160 ಕೆಜಿ ಭಾರ ಎತ್ತಿದ ಸಾಧನೆ ಮಾಡಿದ್ದರು.
ಕ್ರೀಡಾಕೂಟದ ಎರಡನೇ ದಿನದಾಂತ್ಯದ ವೇಳೆಗೆ ಭಾರತಕ್ಕೆ ಎರಡು ಚಿನ್ನ ಸಹಿತ ಐದು ಪದಕ ಲಭಿಸಿದೆ. ಮೊದಲ ದಿನವಾದ ಶನಿವಾರ ಸಂಕೇತ್ ಸರ್ಗಾರ್ ಬೆಳ್ಳಿ ಪದಕ, ಗುರುರಾಜ ಪೂಜಾರಿ ಕಂಚಿನ ಪದಕ, ಮೀರಾಬಾಯಿ ಚಾನು ಚಿನ್ನದ ಪದಕ ಗಳಿಸಿದ್ದರು. ಎರಡನೇ ದಿನವಾದ ಭಾನುವಾರ ಬಿಂದ್ಯಾರಾಣಿ ಬೆಳ್ಳಿ ಪದಕ ಮತ್ತು ಇದೀಗ ಜೆರೆಮಿ ಲಾಲ್ರಿನ್ನುಂಗಾ ಚಿನ್ನದ ಪದಕ ಗಳಿಸಿದ್ದಾರೆ.