ಬರ್ಮಿಂಗ್ಹ್ಯಾಮ್, ಆ 06 (DaijiworldNews/DB): ಇಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕೂಟದ ಮಹಿಳಾ ಹಾಕಿ ಸ್ಪರ್ಧೆಯಲ್ಲಿ ಭಾರತ ತಂಡಕ್ಕೆ ಸೋಲಾಗಿದೆ. ಆದರೆ ಈ ಸೋಲು ಮೋಸದಿಂದ ಕೂಡಿದೆ ಎಂದು ಭಾರತೀಯ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ನಡೆದ ಸೆಮಿ ಫೈನಲ್ ನಲ್ಲಿ ಪೆನಾಲ್ಟಿ ಶೂಟೌಟ್ ನಲ್ಲಿ ಭಾರತದ ವನಿತೆಯರು 0-3 ಅಂತರದಿಂದ ಪರಾಭವಗೊಂಡರು. ಆದರೆ ಈ ವೇಳೆ ಮೋಸ ನಡೆದಿದೆ. ಮೋಸದ ದಾರಿ ಹಿಡಿದು ಭಾರತ ತಂಡಕ್ಕೆ ಚಿನ್ನದ ಅವಕಾಶವನ್ನು ತಪ್ಪಿಸಲಾಗಿದೆ ಎಂದು ಭಾರತೀಯ ಅಭಿಮಾನಿಗಳು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಭಾರತದ ಮೂವರು ಶೂಟರ್ಗಳೂ ಶೂಟೌಟ್ನಲ್ಲಿ ವಿಫಲವಾದರು. ಆದರೆ ನಾಯಕಿ ಮತ್ತು ಗೋಲ್ಕೀಪರ್ ಆಗಿರುವ ಸವಿತಾ ಆಸ್ಟ್ರೇಲಿಯಾದ ಮಲೋನ್ ರ ಮೊದಲ ಶೂಟೌಟ್ ನ್ನು ಚಾಣಾಕ್ಷತನದಿಂದ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಆಸೀಸ್ ಆಟಗಾರ್ತಿಯ ಪ್ರಯತ್ನದ ವೇಳೆ ಗಡಿಯಾರ ಟೈಮರ್ ಆರಂಭವಾಗಿಲ್ಲ ಎಂದು ಆಕೆಗೆ ಮತ್ತೊಂದು ಅವಕಾಶ ನೀಡುವ ಮೂಲಕ ಅಂಪೈರ್ಗಳು ಭಾರತ ತಂಡದ ಪದಕ ತಪ್ಪಿಸಿದ್ದಾರೆ. ಎರಡನೇ ಅವಕಾಶ ಪಡೆದ ಆಸೀಸ್ ಆಟಗಾರ್ತಿ ಗೋಲು ಬಾರಿಸಿ ಜಯ ಗಳಿಸಲು ಅನುವು ಮಾಡಿಕೊಟ್ಟಿದ್ದಾರೆ ಎಂದು ಆಪಾದನೆ ವ್ಯಕ್ತವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಟೀಂ ಇಂಡಿಯಾ ಕೋಚ್ ಜನ್ನೆಕೆ ಶಾಪ್ಮನ್, ಆಸ್ಟ್ರೇಲಿಯಾ ತಂಡ ದೂರು ನೀಡದಿದ್ದರೂ, ಅಧಿಕಾರಿಗಳು ನಾಟಕೀಯ ನಡೆ ಕಾಯ್ದುಕೊಂಡಿರುವುದು ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ.