ಮುಂಬೈ, ಸೆ 11 (DaijiworldNews/DB): ಏಷ್ಯಾಕಪ್ನಲ್ಲಿ ಅಫ್ಘಾನಿಸ್ತಾನದ ವಿರುದ್ದದ ಸೆಣಸಾಟದಲ್ಲಿ ಶತಕ ಬಾರಿಸಿದ್ದ ಕಿಂಗ್ ಕೊಹ್ಲಿ ಶತಕದ ಸಂಭ್ರಮದಲ್ಲಿದ್ದಾರೆ. ಇದೇ ವೇಳೆ ಬಾಲ್ಯದ ಫೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ಜನರಿಗೆ ಸಂದೇಶವೊಂದನ್ನೂ ನೀಡಿದ್ದಾರೆ. ಯಾರನ್ನೂ ನೋಯಿಸಬೇಡಿ ಎಂದು ಆ ಫೋಟೋದಲ್ಲಿ ಬರೆದುಕೊಂಡಿದ್ದಾರೆ.
ಹೌದು ವಿರಾಟ್ ಕೊಹ್ಲಿ ಕಳೆದ ಮೂರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಶತಕ ಸಿಡಿಸಿದ್ದರು. ಆ ಮೂಲಕ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ಆ ಸಂಭ್ರಮವಿನ್ನೂ ಕೊಹ್ಲಿ ಅಭಿಮಾನಿಗಳಲ್ಲಿ ಹಚ್ಚಿ ಹಸಿರಾಗಿರುವಾಗಲೇ ಇನ್ಸ್ಟಾಗ್ರಾಂನಲ್ಲಿ ತಮ್ಮ ಬಾಲ್ಯದ ಫೋಟೋವೊಂದನ್ನು ಹಂಚಿಕೊಂಡಿರುವ ಕೊಹ್ಲಿ ವಿಶೇಷ ಸಂದೇಶವೊಂದನ್ನು ರವಾನಿಸಿದ್ದಾರೆ. ಈ ಫೋಟೋದಲ್ಲಿ ಕೊಹ್ಲಿಯವರು ಏನನ್ನೋ ಸೇವಿಸುತ್ತಿದ್ದಾರೆ. ಜೊತೆಗೆ ಖಾವೋ ಪಿಯೋ ಐಶ್ ಕರೋ ಮಿತ್ರೋ, ದಿಲ್ ಪರ್ ಕಿಸೆ ದ ದುಖಾಯೇ ನಾ (ತಿನ್ನಿರಿ, ಕುಡೀರಿ, ಮಜಾ ಮಾಡಿ ಸ್ನೇಹಿತರೇ, ಆದರೆ ಯಾರ ಮನಸನ್ನೂ ನೋಯಿಸದಿರಿ) ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.
ಕೊಹ್ಲಿ ಹೀಗೆ ಬರೆದುಕೊಂಡಿರುವುದು ಯಾಕೆಂದು ಗೊತ್ತಾಗಿಲ್ಲ. ಫೋಟೋದಲ್ಲಿನ ಶೀರ್ಷಿಕೆ ಅವರು ಸಂಭ್ರಮದಲ್ಲಿಯೂ ದುಃಖದಲ್ಲಿರುವುದನ್ನು ತಿಳಿಸುವಂತಿದೆ. ಇತ್ತೀಚೆಗೆ ಕಳಪೆ ಪ್ರದರ್ಶನದಿಂದಾಗಿ ಕೊಹ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಆದರೆ ಕೆಲವರು ಅವರಿಗೆ ಮರಳಿ ತಮ್ಮ ಕ್ರಿಕೆಟ್ ಸಾಮರ್ಥ್ಯವನ್ನು ಪಡೆದುಕೊಳ್ಳಬೇಕಾದರೆ ದೀರ್ಘ ವಿಶ್ರಾಂತಿಯ ಅಗತ್ಯವಿದೆ ಎಂದೂ ವಿಶ್ಲೇಷಿಸಿದ್ದರು. ಈ ಎಲ್ಲದರ ನಡುವೆ ಕೊಹ್ಲಿ ಒಂದುಷ್ಟು ಸಮಯ ವಿಶ್ರಾಂತ್ ತೆಗೆದುಕೊಂಡು ಮತ್ತೆ ಫಾರ್ಮ್ಗೆ ಮರಳಿದ್ದರು. ತಮ್ಮ ಸಂಕಷ್ಟದ ಸಮಯದಲ್ಲಿ ವ್ಯಕ್ತವಾದ ಟೀಕೆಯಿಂದಾಗಿ ಕೊಹ್ಲಿ ಸಾಕಷ್ಟು ನೊಂದಿದ್ದರು ಎನ್ನಲಾಗುತ್ತಿದೆ. ಇದೀಗ ಅವರು ಬರೆದುಕೊಂಡಿರುವ ಸಾಲುಗಳು ಇದೇ ರೀತಿಯಲ್ಲಿ ವ್ಯಕ್ತಿಗೊಂಡಿರುವಂತಿದೆ.