ದಕ್ಷಿಣ ಆಫ್ರಿಕಾ, ಸೆ 13 (DaijiworldNews/DB): ದಕ್ಷಿಣ ಆಫ್ರಿಕಾದ ಮುಖ್ಯ ಕೋಚ್ ಮಾರ್ಕ್ ಬೌಚರ್ ಅವರು ತಮ್ಮ ಕೋಚ್ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಮುಂದಿನ ಅಕ್ಟೋಬರ್-ನವೆಂಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ ನಂತರ ಅವರು ರಾಜೀನಾಮೆ ನೀಡಲಿರುವುದಾಗಿ ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್ಎ) ಸೋಮವಾರ ಪ್ರಕಟಿಸಿದೆ ಎಂದು ತಿಳಿದು ಬಂದಿದೆ. ಭವಿಷ್ಯದ ವೃತ್ತಿ ಜೀವನ ಮತ್ತು ವೈಯಕ್ತಿಕ ಕಾರಣಗಳಿಂದಾಗಿ ಅವರು ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ಸಂಸ್ಥೆ ಹೇಳಿದೆ.
2019ರಿಂದ ಮಾರ್ಕ್ ಬೌಚರ್ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಭಾರತದ ವಿರುದ್ಧ ದಕ್ಷಿಣ ಆಫ್ರಿಕಾದಲ್ಲಿ ಜನರವರಿ ನಡೆದಿದ್ದ ಪಂದ್ಯದಲ್ಲಿ ಅವರ ನೇತೃತ್ವದ ತಂಡ ಗೆಲುವು ಸಾಧಿಸಿತ್ತು. 11 ಟೆಸ್ಟ್ ಮ್ಯಾಚ್ಗಳಲ್ಲಿ ಬೌಚರ್ ಅವರು ದಕ್ಷಿಣ ಆಫ್ರಿಕಾ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸೆಪ್ಟೆಂಬರ್ 28ರಿಂದ ಅಕ್ಟೋಬರ್ 11ರವರೆಗೆ ಭಾರತದ ವೈಟ್-ಬಾಲ್ ಪ್ರವಾಸವನ್ನು ಅವರು ಕೈಗೊಳ್ಳಲಿದ್ದು, ಮುಖ್ಯ ಕೋಚ್ ಆಗಿ ಇದು ಅವರ ಕೊನೆಯ ಪ್ರವಾಸವಾಗಲಿದೆ.
ಇದೇ ವೇಳೆ ಮುಖ್ಯ ಕೋಚ್ ಆಗಿ ಸಮರ್ಥ ಕಾರ್ಯ ನಿರ್ವಹಣೆ ತೋರಿ ತಂಡ ಹಲವು ಪಂದ್ಯಗಳಲ್ಲಿ ಗೆಲ್ಲಲು ಸಾಧ್ಯವಾಗಿಸಿದ ಮಾರ್ಕ್ ಬೌಚರ್ ಅವರ ಸೇವೆ ಮತ್ತು ದೇಶದ ಕ್ರಿಕೆಟ್ ತಂಡಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಕ್ರಿಕೆಟ್ ದಕ್ಷಿಣ ಆಫ್ರಿಕಾ ತಂಡವು ಅವರಿಗೆ ಧನ್ಯವಾದ ಹೇಳಿದೆ. ಕಳೆದ ಮೂರು ವರ್ಷಗಳಲ್ಲಿ ಅವರು ಕ್ರಿಕೆಟ್ ತಂಡದ ಗೆಲುವಿಗಾಗಿ ಶ್ರಮಿಸಿದ ಸಮಯ ಮತ್ತು ಅವರ ಶ್ರಮಕ್ಕೆ ಧನ್ಯವಾದ ಸಲ್ಲಿಸುತ್ತೇವೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೋಲೆಟ್ಸಿ ಮೊಸೆಕಿ ಹೇಳಿದ್ದಾರೆ.