ಸ್ವಿಟ್ಸರ್ಲೆಂಡ್, ಸೆ 16 (DaijiworldNews/DB): ಖ್ಯಾತ ಟೆನ್ನಿಸ್ ತಾರೆ ಸ್ವಿಟ್ಜರ್ಲೆಂಡ್ನ ರೋಜರ್ ಫೆಡರರ್ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಲಂಡನ್ನಲ್ಲಿ ನಡೆಯುವ ಲೇವರ್ ಕಪ್ ಬಳಿಕ ಟೆನ್ನಿಸ್ನಿಂದ ನಿವೃತ್ತಿ ಪಡೆಯುವುದಾಗಿ ಅವರು ಘೋಷಿಸಿಕೊಂಡಿದ್ದಾರೆ.
ನಿವೃತ್ತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಫೆಡರರ್, ಕಳೆದ 24 ವರ್ಷಗಳಿಂದ ಟೆನ್ನಿಸ್ನಲ್ಲಿ ತೊಡಗಿಸಿಕೊಂಡಿದ್ದು, ಲೇವರ್ ಕಪ್ ಕೊನೆಯ ಎಟಿಪಿ ಪಂದ್ಯಾವಳಿಯಾಗಲಿದೆ.1500 ಟೂರ್ನಿಗಳಲ್ಲಿ ಇಲ್ಲಿವರೆಗೆ ಭಾಗಿಯಾಗಿದ್ದು, ದೇಶಕ್ಕಾಗಿ ಆಡಿದ ತೃಪ್ತಿಯಿದೆ. ಇಲ್ಲಿವರೆಗೆ ನನ್ನ ಪ್ರತಿಭೆಯನ್ನು ಗೌರವಿಸಿ, ಹುರಿದುಂಬಿಸಿದ ಮತ್ತು ಸಹಕರಿಸಿದ ಎಲ್ಲರಿಗೂ ಅಭಾರಿಯಾಗಿದ್ದೇನೆ ಎಂದಿದ್ದಾರೆ.
20 ಗ್ರಾಂಡ್ ಸ್ಲ್ಯಮ್ ಸಿಂಗಲ್ಸ್ ಪಶಸ್ತಿಗಳನ್ನ ಗೆದ್ದ ಮೊದಲಿಗರು ಎಂಬ ಹೆಮ್ಮೆಗೆ ರೋಜರ್ ಫೆಡರರ್ ಪಾತ್ರರಾಗಿದ್ದಾರೆ.
ಇನ್ನು ಫೆಡರರ್ ಟೆನ್ನಿಸ್ನಿಂದ ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಉತ್ತಮ ಆಟವನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರೂ ಮೆಚ್ಚಿಕೊಂಡು ಟ್ವೀಟ್ ಮಾಡಿದ್ದಾರೆ. ನಿಮ್ಮ ಟೆನಿಸ್ ಆಟದಲ್ಲಿನ ಕ್ರೀಡಾ ಸಾಮರ್ಥ್ಯಕ್ಕೆ ಬೆರಗಾಗಿದ್ದೇನೆ. ಹವ್ಯಾಸಗಳು ಎಂದಿಗೂ ನಿವೃತ್ತಿಯಾಗುವುದಿಲ್ಲ ಮತ್ತು ಅವುಗಳು ಬದುಕಿನ ಭಾಗವಾಗಿಯೇ ಉಳಿಯುತ್ತವೆ ಎಂದು ಬರೆದುಕೊಂಡಿದ್ದಾರೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರೂ ಫೆಡರರ್ ನಿವೃತ್ತ ಜೀವನಕ್ಕೆ ಶುಭ ಹಾರೈಸಿದ್ದು, ಆಲ್ ಟೈಮ್ ಗ್ರೇಟ್, ಕಿಂಗ್ ರೋಜರ್' ಎಂದು ಬಣ್ಣಿಸಿದ್ದಾರೆ.