ಸತಾರಾ, ಸೆ 18 (DaijiworldNews/DB): 11ನೇ ಸತಾರಾ ಹಿಲ್ ಹಾಫ್ ಮ್ಯಾರಥಾನ್ನಲ್ಲಿ ಭಾಗಿಯಾಗಿದ್ದ ವೇಳೆ ರಾಷ್ಟ್ರೀಯ ಟೇಬಲ್ ಟೆನಿಸ್ ಆಟಗಾರ ರಾಜ್ ಪಟೇಲ್ ಹೃದಯಾಘಾತದಿಂದ ಭಾನುವಾರ ಮೃತಪಟ್ಟಿದ್ದಾರೆ.
32 ವರ್ಷದ ರಾಜ್ ಪಟೇಲ್ ಮೂಲತಃ ಕೊಲ್ಹಾಪುರದವರಾಗಿದ್ದು, ಮಹಾರಾಷ್ಟ್ರದ ಸತಾರದಲ್ಲಿ ನಡೆಯುತ್ತಿರುವ 11ನೇ ಸತಾರಾ ಹಿಲ್ ಹಾಫ್ ಮ್ಯಾರಥಾನ್ನಲ್ಲಿ ಭಾಗವಹಿಸಿದ್ದರು. ಮ್ಯಾರಥಾನ್ನಲ್ಲಿ ಭಾಗಿಯಾಗಿದ್ದಾಗಲೇ ಅವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಸುಮಾರು 7,000 ಮಂದಿ ಮ್ಯಾರಥಾನ್ನಲ್ಲಿ ಭಾಗವಹಿಸಿದ್ದು, ಇತರ ಮೂವರು ಸ್ಪರ್ಧಿಗಳು ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ಪಟೇಲ್ ಅವರ ಪಾರ್ಥಿವ ಶರೀರವನ್ನು ಸತಾರಾ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮರಣೋತ್ತರ ಪರೀಕ್ಷೆಯನ್ನೂ ಅಲ್ಲೇ ನಡೆಸಲಾಗುತ್ತದೆ ಎನ್ನಲಾಗಿದೆ.