ಸರ್ಬಿಯಾ, ಸೆ 19 (DaijiworldNews/MS): ವಿಶ್ವ ಕುಸ್ತಿ ಚಾಂಪಿಯನ್ ಶಿಪ್ 2022 ರ ಅಂತಿಮ ದಿನದಂದು ಪುರುಷರ 65 ಕೆಜಿ ವಿಭಾಗದಲ್ಲಿ ಭಾರತದ ಕ್ರೀಡಾಪಟು ಬಜರಂಗ್ ಪೂನಿಯಾ ಕಂಚಿನ ಪದಕ ಗೆಲ್ಲುವ ಮೂಲಕ "ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ನಾಲ್ಕು ಪದಕಗಳನ್ನು ಗೆದ್ದ ಏಕೈಕ ಭಾರತೀಯ"ಎಂಬ ಸಾಧನೆ ಮಾಡಿದ್ದಾರೆ.
ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ಗಾಯಗೊಂಡ ಕಾರಣ ತಲೆಗೆ ಬ್ಯಾಂಡೇಜ್ ಹಾಕಿಕೊಂಡಿದ್ದ ಬಜರಂಗ್, ಪಂದ್ಯದ ಆರಂಭದಲ್ಲಿ 6-0 ಅಂತರದಲ್ಲಿ ಹಿನ್ನಡೆ ಅನುಭವಿಸಿದ ನಂತರ ಪೋರ್ಟೊ ರಿಕೊದ ಸೆಬಾಸ್ಟಿಯನ್ ರಿವೇರಾ ವಿರುದ್ಧ ಉತ್ಸಾಹಭರಿತ ಹೋರಾಟ ನಡೆಸಿ 11-9 ಅಂಕಗಳ ಅಂತರದಿಂದ ಜಯ ಸಾಧಿಸಿದರು.
ಕ್ವಾರ್ಟರ್ಫೈನಲ್ನಲ್ಲಿ ಅಮೆರಿಕದ ಜಾನ್ ಮೈಕೆಲ್ ಡಯಾಕೊಮಿಹಾಲಿಸ್ ವಿರುದ್ಧ ಸೋತಿದ್ದ ಬಜರಂಗ್, ರೆಪೆಚೇಜ್ ಸುತ್ತಿನ ಮೂಲಕ ಕಂಚಿನ ಪದಕ ಸ್ಪರ್ಧೆಗೆ ಅರ್ಹತೆ ಪಡೆದರು, ಅಲ್ಲಿ ಅವರು ಅರ್ಮೇನಿಯಾದ ವಾಜ್ಗೆನ್ ತೆವನ್ಯನ್ ಅವರನ್ನು 7-6 ಪಾಯಿಂಟ್ಗಳಿಂದ ಸೋಲಿಸಿದ್ದರು.