ನವದೆಹಲಿ, ಸೆ 21 (DaijiworldNews/DB): ಭಾರತೀಯ ಮಹಿಳಾ ತಂಡದ ನಾಯಕಿಯಾಗಿದ್ದ ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಬೆನ್ನಲ್ಲೇ ಇದೀಗ ಎರಡನೇ ಬಾರಿ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ. ಕ್ರಿಕೆಟ್ ಸ್ಟಾರ್ ರಾಜಕೀಯಕ್ಕೆ ಬರುತ್ತಾರೆಯೇ ಎಂಬ ಚರ್ಚೆಗಳೂ ನಡೆಯುತ್ತಿವೆ.
ಮಹಿಳಾ ಕ್ರಿಕೆಟ್ನಲ್ಲಿ ಮಿಥಾಲಿ ರಾಜ್ ಸಾಧನೆ ದೊಡ್ಡದು. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಎರಡು ದಶಕ ಕಾಲ ಆಡಿದ ಮಿಥಾಲಿ, ಎರಡು ಏಕದಿನ ವಿಶ್ವಕಪ್ ಫೈನಲ್ 12 ಟೆಸ್ಟ್ ಪಂದ್ಯಗಳಲ್ಲಿ ಒಂದು ಶತಕ ಹಾಗೂ ನಾಲ್ಕು ಅರ್ಧ ಶತಕ ಬಾರಿಸಿದ್ದಾರೆ. ಒಟ್ಟು 10ಸಾವಿರಕ್ಕಿಂತಲೂ ಅಧಿಕ ರನ್ ದಾಖಲೆ ಅವರದು. ಕೆಲವು ತಿಂಗಳುಗಳ ಹಿಂದಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಅವರು ವಿದಾಯ ಹೇಳಿದ್ದರು.
ಇದೀಗ ಮಿಥಾಲಿ ರಾಜ್ ಮತ್ತೆ ಸುದ್ದಿಯಾಗಿದ್ದಾರೆ. ಇದಕ್ಕೆ ಕಾರಣ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುರುವುದು. ಅಮಿತ್ ಶಾ ಭೇಟಿ ಬಳಿಕ ಮಿಥಾಲಿ ರಾಜ್ ಅವರು ರಾಜಕೀಯಕ್ಕೆ ಬರಲಿದ್ದಾರೆಯೇ ಎಂಬ ಸುದ್ದಿಗಳೂ ಚರ್ಚೆಯಾಗುತ್ತಿವೆ. ಆದರೆ ಈ ಬಗ್ಗೆ ಮಿಥಾಲಿ ರಾಜ್ ಏನೂ ಹೇಳಿಲ್ಲ.
ಅಷ್ಟಕ್ಕೂ ಮಿಥಾಲಿ ರಾಜ್ ಅವರು ಅಮಿತ್ ಶಾ ಅವರನ್ನು ಭೇಟಿಯಾಗುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ ಹೈದ್ರಬಾದ್ನಲ್ಲಿ ಮಿಥಾಲಿ ರಾಜ್ ಮತ್ತು ಅಮಿತ್ ಶಾ ಅವರು ಭೇಟಿಯಾಗಿದ್ದರು.
ಮಿಥಾಲಿ ರಾಜ್ ಭೇಟಿ ಬಳಿಕ ಟ್ವೀಟ್ ಮಾಡಿರುವ ಅಮಿತ್ ಶಾ, ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರ ಭೇಟಿ ಅತ್ಯಂತ ಸಂತಸ ತಂದಿದೆ. ಯುವ ಸಮುದಾಯಕ್ಕೆ ಅವರೊಬ್ಬ ಸ್ಪೂರ್ತಿ ಎಂದು ಬರೆದುಕೊಂಡಿದ್ದಾರೆ.