ಇಂಗ್ಲೆಂಡ್, ಸೆ 22 (DaijiworldNews/DB): ಭಾರತ ವನಿತೆಯರ ಕ್ರಿಕೆಟ್ ತಂಡವು ಅತಿಥೇಯ ಇಂಗ್ಲೆಂಡ್ ವಿರುದ್ದ 88 ರನ್ಗಳ ಭರ್ಜರಿ ಜಯ ಸಾಧಿಸಿದ್ದು, ಆಂಗ್ಲರ ನೆಲದಲ್ಲಿ1999ರ ನಂತರ ಇದೇ ಮೊದಲ ಬಾರಿಗೆ ಏಕದಿನ ಸರಣಿಯನ್ನು ಗೆದ್ದು ಬೀಗಿದೆ.
ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ಅಮೋಘ ಶತಕ ಇಂಗ್ಲೆಂಡ್ ವಿರುದ್ದ ಜಯ ಸಾಧಿಸುವಲ್ಲಿ ಭಾರತ ತಂಡಕ್ಕೆ ನೆರವಾಯಿತು. 2-0 ಅಂತರದಿಂದ ಗೆಲುವು ಭಾರತದ ಪಾಲಾಗಿದೆ. ಕ್ಯಾಂಟರ್ಬರ್ರಿಯ ಸೇಂಟ್ ಲಾರೆನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಭಾರತ ಮೊದಲು ಬ್ಯಾಟಿಂಗ್ ಮಾಡಿತು. ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 333 ರನ್ ಭಾರತ ಪಡೆದುಕೊಂಡಿತು. ಇಂಗ್ಲೆಂಡ್ ವನಿತೆಯರು 44.2 ಓವರ್ ಗಳಲ್ಲಿ 245 ರನ್ ಗಳಿಸಿ ಸೋಲೊಪ್ಪಿಕೊಂಡರು.
ಭಾರತ ವನಿತೆಯರ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ 143 ರನ್ ಪೇರಿಸುವ ಮೂಲಕ ಶತಕದ ಸಾಧನೆ ಮಾಡುವುದರೊಂದಿಗೆ ಭಾರತ ತಂಡವನ್ನು ಗೆಲ್ಲಿಸಿಕೊಟ್ಟರು. ಅಲ್ಲದೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಇನ್ನು ಶಫಾಲಿ ವರ್ಮಾ 8, ಸ್ಮೃತಿ ಮಂಧಾನ 40, ಯಸ್ತಿಕಾ ಭಾಟಿಯಾ 26, ಹರ್ಲಿನ್ ಡಿಯೊಲ್ 58 ರನ್ ಗಳಿಸಿದರು.