ಮಂಗಳೂರು, ಸೆ 26 (DaijiworldNews/DB): ಹೈದರಾಬಾದ್ನಲ್ಲಿ ಸೆಪ್ಟಂಬರ್ 24ರಂದು ನಡೆದ ದಕ್ಷಿಣ ಭಾರತ ವಲಯ ಮಟ್ಟದ ಶಾರ್ಟ್ ಗನ್ ಡಬಲ್ ಟ್ರಾಪ್ ಶೂಟಿಂಗ್ ಸ್ಪರ್ಧೆಯಲ್ಲಿ ಎಸ್ಡಿಎಂ ಕಾನೂನು ಕಾಲೇಜಿನ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿ ಸ್ಯಾಮುವೆಲ್ ಸಿಮ್ಸನ್ ಅವರು ಚಿನ್ನದ ಪದಕ ಗಳಿಸಿದ್ದಾರೆ.
ಇದಕ್ಕೂ ಮೊದಲು ಎರಡು ದಿನದ ಹಿಂದೆ (ಸೆಪ್ಟಂಬರ್ 22) ಹೈದರಾಬಾದ್ನಲ್ಲಿ ನಡೆದ ದಕ್ಷಿಣ ಭಾರತ ವಲಯ ಮಟ್ಟದ ಶಾರ್ಟ್ ಗನ್ ಟ್ರಾಪ್ ಶೂಟಿಂಗ್ ಸ್ಪರ್ಧೆಯಲ್ಲೂ ಭಾಗವಹಿಸಿ ಬೆಳ್ಳಿ ಪದಕ ಪಡೆದಿದ್ದರು. ಈ ಎರಡು ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ದೆಹಲಿಯಲ್ಲಿ ಮುಂದೆ ನಡೆಯಲಿರುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. 19 ವರ್ಷ ವಯಸ್ಸಿನಲ್ಲಿ ರಾಜ್ಯ ಮತ್ತು ದಕ್ಷಿಣ ಭಾರತ ವಲಯ ಮಟ್ಟದ ಸ್ಪರ್ಧೆಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಗಳಿಸಿದ ಜಿಲ್ಲೆಯ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಸ್ಯಾಮುವೆಲ್ ಪಾತ್ರರಾಗಿದ್ದಾರೆ.
ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕದೊಂದಿಗೆ ತವರು ಜಿಲ್ಲೆಗೆ ಆಗಮಿಸಿದ ಸ್ಯಾಮುವೆಲ್ ಅವರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ರಾತ್ರಿ ಸ್ವಾಗತಿಸಲಾಯಿತು. ಮಾಜಿ ಸಚಿವ ಅಭಯಚಂದ್ರ ಜೈನ್, ಮಿಥುನ್ ರೈ, ಬಿರುವೆರ್ ಕುಡ್ಲದ ಉದಯ್ ಮತ್ತಿತರರು ಸ್ವಾಗತಿಸಿ ಶುಭ ಹಾರೈಸಿದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಯಾಮುವೆಲ್, ಸೆಪ್ಟಂಬರ್ 16ರವರೆಗೆ ಆಂತರಿಕ ಪರೀಕ್ಷೆಗಳಿದ್ದ ಕಾರಣದಿಂದಾಗಿ ಅಭ್ಯಾಸ ಮಾಡುವುದು ಸಾಧ್ಯವಾಗಿರಲಿಲ್ಲ. ಆದಾಗ್ಯೂ ಸ್ಪರ್ಧೆಯಲ್ಲಿ ಎಲ್ಲಾ ಪ್ರಮುಖ ಶೂಟರ್ಗಳನ್ನು ಹಿಂದಿಕ್ಕಿ, ಅತಿ ಹೆಚ್ಚು ಅಂಕ ಪಡೆದು ಚಿನ್ನದ ಪದಕ ಗಳಿಸಿದ್ದೇನೆಂಬ ಖುಷಿ ಇದೆ ಎಂದು ಸಂತಸ ಹಂಚಿಕೊಂಡರು.
ನನ್ನನ್ನು ಪ್ರೋತ್ಸಾಹಿಸಿದ ತಂದೆಗೆ ಈ ಗೆಲುವಿನ ಕ್ರೆಡಿಟ್ ಸ;ಲ್ಲುತ್ತದೆ. ರಾಷ್ಟ್ರೀಯ ಖ್ಯಾತಿಯ ಶೂಟರ್, ತಮಿಳುನಾಡಿನ ಸಿಬಿ ರಾಜೇಶ್ ಚಕ್ರವರ್ತಿ ನನಗೆ ಸ್ಫೂರ್ತಿ. ಮಂಗಳೂರಿನಲ್ಲಿ ಫಯರಿಂಗ್ ರೇಂಜ್ಗಳ ಕೊರತೆಯಿರುವುದರಿಂದ ಇಲ್ಲಿ ಶೂಟರ್ಗಳಿಗೆ ಸ್ವಲ್ಪ ತ್ರಾಸದಾಯಕವಾಗಿದೆ ಎಂದರು.