ಇಟಾವಾ, ಸೆ 26 (DaijiworldNews/DB): ಬಾಸ್ಕೆಟ್ಬಾಲ್ ರೆಫರಿಯೊಬ್ಬರು ಚಲಿಸುತ್ತಿದ್ದ ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ಕಾನ್ಪುರ ಬಳಿ ನಡೆದಿದೆ.
ಯಶವರ್ಧನ್ ರಾಣಾ (25) ಮೃತಪಟ್ಟವರು. ಕಾನ್ಪುರ-ತುಂಡ್ಲಾ ವಿಭಾಗದ ಎಕ್ದಿಲ್ ಮತ್ತು ಭರ್ತನ ರೈಲು ನಿಲ್ದಾಣಗಳ ನಡುವೆ ಸಂಗಮ್ ಎಕ್ಸ್ಪ್ರೆಸ್ನಲ್ಲಿ ಸಂಚರಿಸುತ್ತಿದ್ದ ವೇಳೆ ಅವರು ರೈಲಿನಿಂದ ಬಿದ್ದಿದ್ದಾರೆ. ಭಾನುವಾರ ಬೆಳಗ್ಗೆ ರೈಲು ಕಾನ್ಪುರ ನಿಲ್ದಾಣ ತಲುಪಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಶೋಧ ಕಾರ್ಯ ನಡೆಸಿದಾಗ ಇಟಾವ ಜಿಲ್ಲೆಯ ಭರ್ತನ ನಿಲ್ದಾಣದ ಬಳಿ ರೈಲ್ವೆ ಹಳಿಯ ಬದಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಬಳಿಕ ಬಾಸ್ಕೆಟ್ಬಾಲ್ ಸಂಸ್ಥೆಯ ಪದಾಧಿಕಾರಿಗಳು ಬಂದು ಮೃತದೇಹವನ್ನು ಗುರುತಿಸಿದರು ಎಂದು ತಿಳಿದು ಬಂದಿದೆ.
ಮೀರತ್ನ ಮೋದಿ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಇನ್ ಸ್ಟ್ರಕ್ಟರ್ ಆಗಿರುವ ರಾಣಾ ಅವರು ಚೌಧರಿ ಹರ್ಮೋಹನ್ ಸಿಂಗ್ ಯಾದವ್ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ನಡೆಯಲಿದ್ದ 61ನೇ ಉತ್ತರ ಪ್ರದೇಶದ ಬಾಸ್ಕೆಟ್ಬಾಲ್ ಸ್ಪರ್ಧೆಗಾಗಿ ಮೀರತ್ ತಂಡದೊಂದಿಗೆ ಕಾನ್ಪುರಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಘಟನೆ ನಡೆದಿದೆ.