ತಿರುವನಂತಪುರಂ, ಸೆ 29 (DaijiworldNews/DB): 11 ಸೆಕೆಂಡುಗಳು.. 5 ವಿಕೆಟ್ ಗಳು..! ಕಳೆದ ರಾತ್ರಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಪಂದ್ಯದ ಆರಂಭಿಕ ಹಂತವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿ ಟೀಂ ಇಂಡಿಯಾಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ರೀತಿಯಿದು.
ಬಹುಶಃ ನಿನ್ನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ಗಳ ಅದ್ಭುತ ಆರಂಭ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲದೆ, ಈ ಆಘಾತವನ್ನು ಸೌತ್ ಆಫ್ರಿಕಾ ಬ್ಯಾಟ್ಸ್ಮನ್ಗಳು ಊಹೆಯೇ ಮಾಡಿರಲಿಕ್ಕಿಲ್ಲ. ಎಂಟು ವಿಕೆಟ್ಗಳ ನಷ್ಟಕ್ಕೆ ಪರಾಭವಗೊಂಡ ದಕ್ಷಿಣ ಆಫ್ರಿಕಾ ತಂಡದ ವಿರುದ್ದ ಟೀಂ ಇಂಡಿಯಾ ಆರಂಭದಿಂದಲೂ ಅದ್ಬುತ ಪರಾಕ್ರಮವನ್ನೇ ಮೆರೆದಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡದ ಬ್ಯಾಟ್ಸ್ಮೆನ್ಗಳಿಗೆ ಟೀಂ ಇಂಡಿಯಾ ಬೌಲರ್ಗಳು ಶಾಕ್ ಮೇಲೆ ಶಾಕ್ ನೀಡಿದ್ದರು. ದೀಪಕ್ ಚಾಹರ್ ಮತ್ತು ಆರ್ಶಾದೀಪ್ ಸಿಂಗ್ ಅವರ ಅದ್ಬುತ ಬೌಲಿಂಗ್ಗೆ ಸೌತ್ ಆಫ್ರಿಕಾದ ಪ್ರಮುಖ ನಾಲ್ವರು ಬ್ಯಾಟ್ಸ್ಮನ್ಗಳು ಶೂನ್ಯಕ್ಕೆ ಔಟಾದರು. 2.5 ಓವರ್ ಗಳಲ್ಲಿ 9 ರನ್ ಗೆ ಐದು ವಿಕೆಟ್ ಅವರ ಸ್ಕೋರ್ ಬೋರ್ಡ್ ಆಗಿತ್ತು. ಮೊದಲ 15 ಎಸೆತಗಳಲ್ಲಿ 9 ರನ್ ಗೆ 5 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ ಕೊನೆಗೂ ಎಂಟು ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿತ್ತು.
ಬಳಿಕ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ಗೆಲುವು ಸುಲಭವಾಗಿದ್ದರೂ, ಶ್ರಮ ಅಗತ್ಯವಿತ್ತು. ನಾಯಕ ರೋಹಿತ್ ಶರ್ಮಾ ಖಾತೆ ತೆರೆಯಲಿಲ್ಲ. ವಿರಾಟ್ ಕೊಹ್ಲಿ ಕೇವಲ ಮೂರು ರನ್ ಗಳಿಸಿದರು. ಕೆ.ಎಲ್. ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಅಜೇಯ ಅರ್ಧಶತಕದಿಂದಾಗಿ ಟೀಂ ಇಂಡಿಯಾ ಗೆಲುವಿನ ನಗೆ ಬೀರಿತ್ತು.
ಇನ್ನು ಟೀಂ ಇಂಡಿಯಾ ಗೆಲುವಿಗೆ ಮತ್ತು ಆರಂಭದ ಪರಾಕ್ರಮಕ್ಕೆ ಬಿಸಿಸಿಐ ಮೆಚ್ಚುಗೆ ಸೂಚಿಸಿದೆ. ದಕ್ಷಿಣ ಆಫ್ರಿಕಾದ ಐದು ವಿಕೆಟ್ ಪತನವಾದನ್ನು 11 ಸೆಕೆಂಡುಗಳಲ್ಲಿ ವೀಡಿಯೋ ಮಾಡಿ ಟ್ವಿಟರ್ನಲ್ಲಿ ಶೇರ್ ಮಾಡಿರುವ ಬಿಸಿಸಿಐ 11 ಸೆಕೆಂಡುಗಳಲ್ಲಿ 5 ವಿಕೆಟ್ಗಳು ಎಂದು ಬರೆದುಕೊಂಡಿದೆ. ಆ ಮೂಲಕ ಟೀಂ ಇಂಡಿಯಾದ ಅದ್ಭುತ ಪ್ರದರ್ಶನವನ್ನು ಕೊಂಡಾಡಿದೆ.