ನವದೆಹಲಿ, ಅ 02 (DaijiworldNews/DB): ಭಾರತದ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಅವರ ಬೌಲಿಂಗ್ ಸಾಧನೆ ದೊಡ್ಡಡು. ಟೀಂ ಇಂಡಿಯಾದ ಪ್ರಮುಖ ಬೌಲರ್ ಆಗಿಯೂ ಗುರುತಿಸಿಕೊಂಡಿರುವ ಅವರು ಹಂಗಾಮಿ ನಾಯಕತ್ವವನ್ನೂ ತನ್ನದಾಗಿಸಿಕೊಂಡಿದ್ದಾರೆ. ದೇಶ-ವಿದೇಶಗಳಲ್ಲಿ ಹೆಸರು ಮಾಡಿರುವ ಬುಮ್ರಾ ಅವರು ಕ್ರಿಕೆಟಿಗನಾಗುವುದು ಅವರ ತಾಯಿಗೆ ಕಿಂಚಿತ್ತೂ ಇಷ್ಟವಿರಲಿಲ್ಲವಂತೆ!
ಹೌದು. ಸಂದರ್ಶನವೊಂದರಲ್ಲಿ ಮಾತನಾಡಿದ ಜಸ್ಪ್ರಿತ್ ಬುಮ್ರಾ ಈ ವಿಚಾರವನ್ನು ಹೇಳಿಕೊಂಡಿದ್ದಾರೆ.ನನ್ನದು ಕ್ರಿಕೆಟ್ ಆಟಗಾರನಾಗುವ ಕನಸಾದರೆ, ನಾನು ಚೆನ್ನಾಗಿ ಇಂಗ್ಲಿಷ್ ಕಲಿತು ಡಾಕ್ಟರ್, ಎಂಜಿನಿಯರ್ ಆಗಿ ಜೀವನದಲ್ಲಿ ಭದ್ರತೆ ಪಡೆಯುವುದೇ ನನ್ನಮ್ಮನ ಆಕಾಂಕ್ಷೆಯಾಗಿತ್ತು ಎನ್ನುತ್ತಾರೆ ಬುಮ್ರಾ.
ಬುಮ್ರಾ ತಾಯಿ ಶಾಲೆಯೊಂದರ ಪ್ರಾಂಶುಪಾಲೆ. ಬುಮ್ರಾ ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದರು. ಹೀಗಾಗಿ ಮಕ್ಕಳನ್ನು ಸಾಕುವ ಜವಾಬ್ದಾರಿ ತಾಯಿಯ ಹೆಗಲಿನಲ್ಲಿತ್ತು. ಇದೇ ಕಾರಣಕ್ಕೆ ಅವರ ಜೀವನ ಭದ್ರತೆಯ ಭಯವೂ ಅಮ್ಮನಿಗಿತ್ತು. ಕ್ರಿಕೆಟಿಗನಾಗುವ ಕನಸು ಕಂಡಿದ್ದ ಬುಮ್ರಾ ಅದನ್ನು ತಾಯಿಯೆದುರು ವ್ಯಕ್ತಪಡಿಸುವಾಗ ಅದಕ್ಕೆ ಅನುಮತಿಯನ್ನೇ ನೀಡದ ತಾಯಿ, ಉತ್ತಮ ಇಂಗ್ಲಿಷ್ ಕಲಿತು ಡಾಕ್ಟರ್, ಎಂಜಿನಿಯರ್ ಆಗಬೇಕು. ಜೀವನಭದ್ರತೆ ನೀಡುವ ಉದ್ಯೋಗ ಹಿಡಿಯಬೇಕು ಎಂದೇ ಅಮ್ಮ ಹೇಳಿದ್ದರು ಎಂದು ಸ್ಮರಿಸುತ್ತಾರೆ ಬುಮ್ರಾ.
ಬುಮ್ರಾ ಕುಟುಂಬದಲ್ಲಿ ಬಹುತೇಕ ಎಲ್ಲರೂ ವಿದ್ಯಾವಂತರೇ. ದೊಡ್ಡ ದೊಡ್ಡ ಉದ್ಯೋಗಗಳಲ್ಲಿ ತೊಡಗಿಸಿಕೊಂಡವರು. ಅಮ್ಮನ ಮಾತಿಗೆ ಇದೂ ಒಂದು ಕಾರಣವಾಗಿತ್ತು ಎನ್ನುತ್ತಾರೆ ಅವರು.
ಆದರೆ ನನ್ನ ಜೀವಾಳ ಕ್ರಿಕೆಟ್ ಆಗಿದ್ದರಿಂದ ನನ್ನ ಆಯ್ಕೆಯನ್ನು ನಾನು ಕಂಡುಕೊಂಡೆ. ಮೊದಲೆಲ್ಲಾ ಇದನ್ನು ಅರಗಿಸಿಕೊಳ್ಳಲು ಕುಟುಂಬಿಕರಿಗೆ ಸಾಧ್ಯವೇ ಆಗಿರಲಿಲ್ಲ ಎಂಬುದು ಬುಮ್ರಾ ಮಾತು.