ಇಂಡೋನೇಶ್ಯಾ, ಅ 02 (DaijiworldNews/DB): ಫುಟ್ಬಾಲ್ ಪಂದ್ಯದಲ್ಲಿ ಸೋಲನುಭವಿಸಿದ್ದಕ್ಕೆ ಅಭಿಮಾನಿಗಳ ಮಧ್ಯೆ ನಡೆದ ಗಲಾಟೆ ತಾರಕಕ್ಕೇರಿ ಸುಮಾರು 174 ಮಂದಿ ಸಾವನ್ನಪ್ಪಿದ ಘಟನೆ ಇಂಡೋನೇಷ್ಯಾದ ಪೂರ್ವ ಜಾವಾದ ಕಂಜುರುಹಾನ್ ಸ್ಟೇಡಿಯಂನಲ್ಲಿ ನಡೆದಿದೆ.
ಅರೆಮಾ ಎಫ್ ಸಿ ಮತ್ತು ಪರ್ಸೆಬಯಾ ಸುರಬಯಾ ನಡುವೆ ನಡೆದ ಪಂದ್ಯದಲ್ಲಿ ಅರೆಮಾ ಎಫ್ಸಿ ತಂಡ ಪರಾಭವಗೊಂಡಿತ್ತು. ತಮ್ಮಿಷ್ಟದ ತಂಡ ಸೋತದ್ದಕ್ಕೆ ಅಭಿಮಾನಿಗಳು ಆಕ್ರೋಶಗೊಂಡು, ಎರಡು ತಂಡಗಳ ಮಧ್ಯೆ ಗಲಾಟೆ ಶುರುವಾಗಿದೆ. ಈ ಗಲಾಟೆ ತಾರಕಕ್ಕೇರಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇದರಿಂದಾಗಿ 174 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಇನ್ನು ಘಟನೆಯಲ್ಲಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳೀಯ ಪೊಲೀಸರು ಸ್ಥಳಕ್ಕಾಗಮಿಸಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆಂದು ತಿಳಿದು ಬಂದಿದೆ.