ಮುಂಬೈ, ಅ 04 (DaijiworldNews/DB): ಹನ್ಸಾ ರಿಸರ್ಚ್ ಸಿದ್ಧಪಡಿಸಿದ ಬ್ರಾಂಡ್ ಎಂಡೋಸರ್ ರಿಪೋರ್ಟ್ 2022ರಲ್ಲಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ನಂ. 1 ಕ್ರೀಡಾ ಸೆಲೆಬ್ರಿಟಿಯಾಗಿ ಹೊರ ಹೊಮ್ಮಿದ್ದಾರೆ. ಅವರು ಶೇ. 84 ಮಾನ್ಯತೆ ಅಂಕಗಳೊಂದಿಗೆ ಕ್ರೀಡಾ ವಿಭಾಗದಲ್ಲಿ ಅತಿ ಹೆಚ್ಚು ಗುರುತಿಸಲ್ಪಟ್ಟವರೆಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಭಾರತದ 36 ನಗರಗಳಲ್ಲಿ ನಡೆಸಿದ ಸಂಶೋಧನೆಯ ವರದಿಯೇ ಬ್ರಾಂಡ್ ಎಂಡೋಸರ್. ಜನಪ್ರಿಯ, ಜನರಿಷ್ಟದ, ಜಾಗತಿಕ ವ್ಯಕ್ತಿತ್ವ ಹೊಂದಿದ, ಆತ್ಮವಿಶ್ವಾಸಿ, ಮಹತ್ವಾಕಾಂಕ್ಷೆಯುಳ್ಳ, ಫಿಟ್ ಆಗಿರುವ ಮತ್ತು ವಿಶ್ವಾಸಾರ್ಹ ವ್ಯಕ್ತಿತ್ವ ಹೊಂದಿರುವ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ ಸೆಲೆಬ್ರಿಟಿ ಸಚಿನ್ ತೆಂಡೂಲ್ಕರ್ ಎಂದು ಹನ್ಸಾ ರಿಸರ್ಚ್ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಆಶಿಶ್ ಕಾರ್ನಾಡ್ ಹೇಳಿದ್ದಾರೆ.
ನಮ್ಮ ಅಧ್ಯಯನವು ಮಾರಾಟಗಾರರಿಗೆ ಮಾಹಿತಿಯಾಧಾರಿತ ನಿರ್ಣಯಗಳನ್ನು ಕೈಗೊಳ್ಳಲು ಮತ್ತು ಅವರ ಉತ್ಪನ್ನಗಳ ಬ್ರಾಂಡ್ ಪ್ರಚಾರಕರನ್ನು ಗಿಟ್ಟಿಸಿಕೊಳ್ಳಲು ಸಹಕಾರಿಯಾಗಿದೆ. ಎಲ್ಲಾ ರೀತಿಯಲ್ಲಿಯೂ ಅರ್ಹತೆ ಗಳಿಸಿರುವ ಸಚಿನ್ ಅವರು, ನಂ. 1 ಕ್ರೀಡಾ ಸೆಲೆಬ್ರಿಟಿಯಾಗಿ ಮಿಂಚಿದ್ದಾರೆ ಎಂದರು.
ಬ್ರಾಂಡ್ಗಳಿಗೆ ಬಹುಮುಖ್ಯವಾಗಿ ಬೇಕಾಗುವ ಪ್ರಾಮಾಣಿಕತೆ, ನಿಷ್ಠೆ, ಸ್ವಯಂಶಿಸ್ತು ಗುಣಗಳು ಸಚಿನ್ ತೆಂಡೂಲ್ಕರ್ ಅವರಲ್ಲಿ ಉನ್ನತ ಮಟ್ಟದಲ್ಲಿದೆ. ಪ್ರಾಮಾಣಿಕ ಸೆಲೆಬ್ರಿಟಿಯಿಂದ ಪ್ರಚುರಪಡಿಸಲಾದ ಬ್ರಾಂಡ್ಗಳನ್ನು, ಉತ್ಪನ್ನಗಳನ್ನು ಪ್ರೇಕ್ಷಕರು, ಗ್ರಾಹಕರು ಆಯ್ಕೆ ಮಾಡುತ್ತಾರೆ. ಹೀಗಾಗಿ ತೆಂಡೂಲ್ಕರ್ ಅವರ ಆಯ್ಕೆ ಸಮಂಜಸವಾಗಿದೆ ಎಂದವರು ತಿಳಿಸಿದ್ದಾರೆ.