ಮುಂಬೈ, ಅ 06 (DaijiworldNews/DB): ಬೆನ್ನು ನೋವಿನ ಸಮಸ್ಯೆಯಿಂದ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವ ಕಪ್ನಿಂದ ಹೊರಗುಳಿದಿರುವ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅವರ ವಿರುದ್ದ ಹಲವಾರು ಟೀಕೆಗಳು ಬಂದಿದ್ದವು. ಈ ಎಲ್ಲಾ ಟೀಕೆಗಳಿಗೆ ಅಸಮಾಧಾನ ವ್ಯಕ್ತಪಡಿಸಿರುವ ಬುಮ್ರಾ ಪರೋಕ್ಷವಾಗಿ ಟೀಕಾಕಾರರಿಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ತಿರುಗೇಟು ನೀಡಿದ್ದಾರೆ.
ಬೊಗಳುವ ನಾಯಿಗಳಿಗೆಲ್ಲಾ ಕಲ್ಲು ಹೊಡೆಯುತ್ತಾ ನಿಂತುಕೊಂಡರೆ ನಾವು ನಿಜವಾಗಲೂ ಕ್ರಮಿಸಬೇಕಾದ ದಾರಿಯಲ್ಲಿ ಕ್ರಮಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಸದ್ಯ ಬುಮ್ರಾ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಭಿಮಾನಿಗಳು ಬುಮ್ರಾ ನಡೆಯನ್ನು ಸ್ವಾಗತಿಸಿದ್ದಾರೆ.
ಬುಮ್ರಾ ಟಿ20 ವಿಶ್ವ ಕಪ್ನಿಂದ ಹೊರಗುಳಿದ ಬೆನ್ನಲ್ಲೇ ಕ್ರಿಕೆಟ್ ಪಂಡಿತರು ಸೇರಿದಂತೆ ಹಲವಾರು ಮಂದಿ ನೆಟ್ಟಿಗರು ಅವರ ವಿರುದ್ದ ಟೀಕೆ ವ್ಯಕ್ತಪಡಿಸಿದ್ದರು. ಐಪಿಎಲ್ ಸಂದರ್ಭದಲ್ಲಿ ಕಂಡು ಬಾರದ ಗಾಯದ ಸಮಸ್ಯೆಗಳು ಇಂತಹ ಪ್ರಮುಖ ಪಂದ್ಯಗಳ ಸಂದರ್ಭದಲ್ಲಿಯೇ ಯಾಕೆ ಬರುತ್ತವೆ ಎಂದು ಹಲವರು ಪ್ರಶ್ನಿಸಿದ್ದರು. ಅಲ್ಲದೇ ಹೆಚ್ಚು ಹಣ ಸಿಗುವ ಪಂದ್ಯಗಳಿಗಷ್ಟೇ ಇವರೆಲ್ಲ ಪ್ರಾಮುಖ್ಯ ನೀಡುತ್ತಿದ್ದಾರೆ ಎಂದು ಟೀಕಿಸಿದ್ದರು. ಆದರೆ ಎಷ್ಟೇ ಟೀಕೆಗಳು ವ್ಯಕ್ತವಾದರೂ ಸುಮ್ಮನಿದ್ದ ಬುಮ್ರಾ ಸದ್ಯ ಬೆನ್ನುಬೀಳುತ್ತಿರುವ ಹಲವರ ವಿರುದ್ದ ಗರಂ ಆಗಿದ್ದಾರೆ. ಇಲ್ಲಸಲ್ಲದ ನಿಂದನೆಗಳಿಗೆ, ಟ್ರೋಲ್ಗಳಿಗೆ ಪರೋಕ್ಷ ತಿರುಗೇಟು ನೀಡಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.