ವೆಸ್ಟ್ ಇಂಡೀಸ್, ಅ 08 (DaijiworldNews/DB): ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಜಾನ್ ಕ್ಯಾಂಪ್ಬೆಲ್ಗೆ ಕ್ರಿಕೆಟ್ನಿಂದ ನಾಲ್ಕು ವರ್ಷ ನಿಷೇಧ ಹೇರಲಾಗಿದೆ. ಡೋಪಿಂಗ್ ವಿರೋಧಿ ನಿಯಮ ಉಲ್ಲಂಘನೆ ಆರೋಪದಡಿ ಈ ಶಿಕ್ಷೆ ವಿಧಿಸಲಾಗಿದೆ.
ಸದ್ಯ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಆಡುತ್ತಿರುವ ವೆಸ್ಟ್ ಇಂಡೀಸ್ ತಂಡವು ಟಿ20 ವಿಶ್ವಕಪ್ಗಾಗಿ ತಯಾರಿ ನಡೆಸುತ್ತಿದೆ. ಕ್ರೀಡಾಳುಗಳು ಮಾದಕ ವಸ್ತು ಸೇವನೆ ಮಾಡಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಮಾಡುವ ಡೋಪಿಂಗ್ ಟೆಸ್ಟ್ಗೆ ರಕ್ತದ ಮಾದರಿ ನೀಡಲು ನಿರಾಕರಿಸಿದ ಕಾರಣಕ್ಕಾಗಿ ಇದನ್ನು ಡೋಪಿಂಗ್ ವಿರೋಧಿ ನಿಯಮ ಉಲ್ಲಂಘನೆಯೆಂದು ಪರಿಗಣಿಸಿ ಕ್ಯಾಂಪ್ಬೆಲ್ ವಿರುದ್ದ ಕ್ರಮ ಕೈಗೊಳ್ಳುವಂತೆ ಜುಮೈಕಾ ಡೋಪಿಂಗ್ ಆಯೋಗ ಸೂಚಿಸಿತ್ತು. ಅದರಂತೆ ಅವರ ಮೇಲೆ ನಿಷೇಧ ಹೇರಲಾಗಿದೆ.
29ರ ಹರೆಯದ ಕ್ಯಾಂಪ್ಬೆಲ್ 2019 ಜನವರಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಬಾಂಗ್ಲಾದೇಶ ವಿರುದ್ಧ ಈ ವಷಾರಂಭದಲ್ಲಿ ವೆಸ್ಟ್ ಇಂಡೀಸ್ನ್ನು ಪ್ರತಿನಿಧಿಸಿದ್ದು ಅವರ ಕೊನೆಯ ಪಂದ್ಯವಾಗಿತ್ತು. ಎಡಗೈ ಬ್ಯಾಟರ್ ಕ್ಯಾಂಪ್ಬೆಲ್ 20 ಟೆಸ್ಟ್ಗಳು, ಆರು ಏಕದಿನ ಮತ್ತು ಎರಡು ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.
ನಾಲ್ಕು ವರ್ಷಗಳ ನಿಷೇಧ ಅವಧಿ ಕಳೆದು ಮತ್ತೆ ಮೈದಾನಕ್ಕೆ ಮರಳಲು 2026ರವರೆಗೆ ಅವರು ಕಾಯಬೇಕು.