ರಾಂಚಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿದೆ.
ರಾಂಚಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 278 ರನ್ ಪೇರಿಸಿತ್ತು. ಆಫ್ರಿಕಾ ನೀಡಿದ 279 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 45.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 282 ರನ್ ಬಾರಿಸುವ ಮೂಲಕ ಗೆಲುವಿನ ನಗೆ ಬೀರಿತು.
ಭಾರತದ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಇಶಾನ್ ಕಿಶನ್ 93 ಹಾಗೂ ಶ್ರೇಯಸ್ ಅಯ್ಯರ್ ಅಜೇಯ 113 ರನ್ ಗಳ ನೆರವಿನಿಂದ ಭಾರತ ಸುಲಭವಾಗಿ ಗುರಿ ಬೆನ್ನಟ್ಟಿತು. ಇನ್ನುಳಿದಂತೆ ಶಿಖರ್ ಧವನ್ 13, ಶುಭ್ಮನ್ ಗಿಲ್ 28 ರನ್ ಹಾಗೂ ಸಂಜು ಸ್ಯಾಮ್ಸನ್ ಅಜೇಯ 29 ರನ್ ಗಳಿಸಿದ್ದಾರೆ.
ದಕ್ಷಿಣ ಆಫ್ರಿಕಾ ಪರ ಮಲನ್ 25, ರೀಜಾ ಹೆಂಡ್ರಿಕ್ಸ್ 74, ಮಾಕ್ರಾಮ್ 79, ಕಾಲ್ಸೆನ್ 30 ಹಾಗೂ ಡೇವಿಡ್ ಮಿಲ್ಲರ್ ಅಜೇಯ 35 ರನ್ ಪೇರಿಸಿದ್ದಾರೆ.
ಭಾರತದ ಪರ ಮೊಹಮ್ಮದ್ ಸಿರಾಜ್ 3, ವಾಷಿಂಗ್ಟನ್ ಸುಂದರ್, ಶಾಹಬಾಜ್ ಅಹ್ಮದ್, ಕುಲದೀಪ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ತಲಾ 1 ವಿಕೆಟ್ ಪಡೆದಿದ್ದಾರೆ.
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ಅಕ್ಟೋಬರ್ 11ರಂದು ದೆಹಲಿಯಲ್ಲಿ ನಡೆಯಲಿರುವ ಪಂದ್ಯ ಸರಣಿ ನಿರ್ಣಾಯಕ ಪಂದ್ಯವಾಗಲಿದೆ.