ಕೋಲ್ಕತಾ, ಅ 14 (DaijiworldNews/DB): ಬಿಸಿಸಿಐ ಅಧ್ಯಕ್ಷರಾಗಿ ಎರಡನೇ ಅವಧಿಯಲ್ಲಿ ಸೌರವ್ ಗಂಗೂಲಿ ಅವರೇ ಮುಂದುವರಿಯುವುದಕ್ಕೆ ಹಲವರಿಂದ ಆಕ್ಷೇಪ ವ್ಯಕ್ತವಾದ ಕೆಲವು ದಿನಗಳ ಬಳಿಕ ಗಂಗೂಲಿ ಮೌನ ಮುರಿದಿದ್ದಾರೆ. ಆಟಗಾರನಾಗಲೀ, ಆಡಳಿತಗಾರನಾಗಲೀ ಯಾರಿಗೂ ಯಾವುದೇ ಹುದ್ದೆ ಶಾಶ್ವತವಲ್ಲ ಎಂದಿದ್ದಾರೆ.
ಬಿಸಿಸಿಐ ಸಂವಿಧಾನ ತಿದ್ದುಪಡಿ ಹೊರತಾಗಿಯೂ ಸೌರವ್ ಗಂಗೂಲಿ ಅವರಿಗೆ ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಹಲವಾರ ತೊಡಕುಗಳು ಎದುರಾಗಿದ್ದವು. ಕೆಲವು ರಾಜ್ಯ ಮಂಡಳಿಗಳು ಮತ್ತು ಮಾಜಿ ಕ್ರಿಕೆಟಿಗರು ಗಂಗೂಲಿ ಅವರನ್ನು ಎರಡನೇ ಅವಧಿಗೆ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರಿಸಲು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ನಡುವೆ ಬಿಸಿಸಿಐ ಹೊಸ ಅಧ್ಯಕ್ಷರ ಆಯ್ಕೆ ಸಂಬಂಧ ಊಹಾಪೋಹಗಳು ಹರಿದಾಡುತ್ತಿದ್ದು, ಇನ್ನೊಂದು ಅವಧಿಗೆ ಮುಂದುವರಿಯುವುದು ಅಸಾಧ್ಯ ಎಂಬುದು ಈಗಾಗಲೇ ಸ್ವತಃ ಗಂಗೂಲಿ ಅವರಿಗೂ ತಿಳಿದಿದೆ. ಆದರೆ ಇಲ್ಲಿವರೆಗೆ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಮೌನವಾಗಿಯೇ ಇದ್ದ ಗಂಗೂಲಿ, ಇದೀಗ ಸ್ಪಷ್ಟನೆ ನೀಡಿದ್ದಾರೆ.
ಯಾರಿಗೂ ಯಾವ ಹುದ್ದೆಯೂ ಶಾಶ್ವತವಲ್ಲ. ಆಡಳಿತಗಾರನಾಗಿ ನಾನು ಸುದೀರ್ಘ ಇನ್ನಿಂಗ್ಸ್ ಆಡಿದ್ದು, ಮುಂದಿನ ದಿನಗಳಲ್ಲಿ ಇತರ ಕೆಲಸಗಳನ್ನು ನಿರ್ವಹಿಸುವ ಜವಾಬ್ದಾರಿ ನನ್ನ ಮೇಲಿದೆ. ಶಾಶ್ವತವಾಗಿ ಆಟಗಾರನಾಗಿಯೇ ಇರಲು ಅಥವಾ ಆಡಳಿತಗಾರನಾಗಿಯೇ ಇರಲು ಯಾವುದೇ ವ್ಯಕ್ತಿಗೂ ಅಸಾಧ್ಯ. ಆದರೆ ಆ ಸ್ಥಾನದಲ್ಲಿ ಇದ್ದಷ್ಟು ದಿನ ನಾನು ನನ್ನ ಕೆಲಸವನ್ನು ಶ್ರದ್ದೆಯಿಂದ ನಿಭಾಯಿಸಿದ್ದೇನೆ ಎಂದಿದ್ದಾರೆ.