ಜೈಪುರ, ಅ 15 (DaijiworldNews/DB): ಟೀಂ ಇಂಡಿಯಾಕ್ಕೆ ಕಾಲಿಡಲು ತುದಿಗಾಲಲ್ಲಿ ನಿಂತಿರುವ ಅರ್ಜುನ್ ತೆಂಡೂಲ್ಕರ್ ಅದಕ್ಕಾಗಿ ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಇದೀಗ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಗೋವಾ ತಂಡದಲ್ಲಿ ಅರ್ಜುನ್ ತೆಂಡೂಲ್ಕರ್ ಭರ್ಜರಿ ಪ್ರದರ್ಶನಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ.
ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಿಂಚುವ ಮೂಲಕ ಭಾರತ ತಂಡವನ್ನು ಅಧಿಕೃತವಾಗಿ ಸೇರಬೇಕೆಂಬ ಆಕಾಂಕ್ಷೆಯನ್ನು ಹೊಂದಿದ್ದಾರೆ. ಇದಕ್ಕಾಗಿ ದೇಶೀಯ ಕ್ರಿಕೆಟ್ನಲ್ಲಿ ಕಳೆದ ಕೆಲ ವರ್ಷಗಳಿಂದ ಸಾಕಷ್ಟು ಶ್ರಮ ವಹಿಸಿ ಆಡುತ್ತಿದ್ದಾರೆ. ಇದೀಗ ಹಲವಾರು ತರಬೇತಿಗಳ ಬಳಿಕ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾಟದಲ್ಲಿ ಆಡುತ್ತಿರುವ ಅರ್ಜುನ್, ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಜೈಪುರದಲ್ಲಿ ನಿನ್ನೆ ನಡೆದ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಿತ್ತು ಎದುರಾಳಿಗಳನ್ನು ನಡುಗಿಸಿದ್ದಾರೆ. 4 ಓವರ್ ಬೌಲಿಂಗ್ ಮಾಡಿದ ಅರ್ಜುನ್ ಕೇವಲ 10 ರನ್ ಮಾತ್ರ ನೀಡಿದರು. ಉಳಿದಂತೆ ಒಂದು ಮೇಡಿನ್ ಸೇರಿ ನಾಲ್ಕು ವಿಕೆಟ್ ಪತನಗೊಳಿಸಿದರು. ಎದುರಾಳಿ ತಂಡದ ತಿಲಕ್ ವರ್ಮಾ, ವಿಕೆಟ್ ಕೀಪರ್ ಪ್ರತೀಕ್ ರೆಡ್ಡಿ, ಬುದ್ಧಿ ರಾಹುಲ್ ಮತ್ತು ಟಿ. ರವಿತೇಜರನ್ನು ಮಣಿಸಿ ಅರ್ಜುನ್ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಈ ಟೂರ್ನಿಗಾಗಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಬಳಿ ಅರ್ಜುನ್ ತೆಂಡೂಲ್ಕರ್ ವಿಶೇಷ ತರಬೇತಿ ಪಡೆದಿದ್ದರು.