ಮೆಲ್ಬರ್ನ್, ಅ 22 (DaijiworldNews/DB): ಅಗತ್ಯ ಎನಿಸಿದಲ್ಲಿ ಟಿ-20 ವಿಶ್ವಕಪ್ನ ಪ್ರತೀ ಪಂದ್ಯದಲ್ಲಿಯೂ ಒಂದೆರಡು ಬದಲಾವಣೆ ಮಾಡಲು ಸಿದ್ದ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
29 ಮಂದಿ ಕ್ರಿಕೆಟಿಗರ ಶ್ರಮದೊಂದಿಗೆ ಭಾರತ ಕಳೆದೊಂದು ವರ್ಷದಲ್ಲಿ ಟಿ-20 ಅಂತರರಾಷ್ಟ್ರೀಯ ಪಂದ್ಯಗಳನ್ನು ಎದುರಿಸಿದೆ. ತಂಡದ ರಚನೆ, ಫಾರ್ಮ್ ಮುಂತಾದವುಗಳನ್ನು ನೋಡಿಕೊಂಡು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅಲ್ಲದೆ ಮುಂದೆ ಅಗತ್ಯವೆನಿಸಿದಲ್ಲಿ ಬದಲಾವಣೆಗಳನ್ನೂ ಮಾಡಿಕೊಳ್ಳಲಾಗುವುದು. ಅಗತ್ಯ ಬಿದ್ದಲ್ಲಿ ಈ ಬದಲಾವಣೆ ಪ್ರತಿ ಪಂದ್ಯಕ್ಕೂ ಅನ್ವಯಿಸುತ್ತದೆ ಎಂದರು.
ಐಸಿಸಿಯ ಕ್ರೀಡಾಕೂಟಗಳಲ್ಲಿ ನಮ್ಮ ತಂಡದ ಪ್ರದರ್ಶನ ಅಷ್ಟೊಂದು ಉತ್ತಮವಾಗಿರಲಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಕಳೆದ ಒಂಬತ್ತು ವರ್ಷಗಳಲ್ಲಿ ಐಸಿಸಿ ಪಂದ್ಯಗಳನ್ನು ಗೆಲ್ಲಲು ನಮಗೆ ಸಾಧ್ಯವಾಗಿಲ್ಲ. ಆದರೆ ನಮಗೆ ಈ ಪಂದ್ಯಗಳಲ್ಲಿ ಸವಾಲು ಹೆಚ್ಚಿದ್ದವು. ಒತ್ತಡ ಸಾಮಾನ್ಯವಾಗಿ ಯಾವಾಗಲೂ ಇರುತ್ತದೆ. ಆದರೆ ಪಾಕ್ ವಿರುದ್ದ ಗೆಲುವು ಸಾಧಿಸುವುದು ಒತ್ತಡಕ್ಕಿಂತ ಸವಾಲು ಎಂಬುದೇ ನನ್ನ ಭಾವನೆ ಎಂದು ರೋಹಿತ್ ಶರ್ಮಾ ಮುಕ್ತವಾಗಿ ಹೇಳಿಕೊಂಡಿದ್ದಾರೆ.