ಕೋಲ್ಕತ್ತ, ಅ 24 (DaijiworldNews/DB): ಬಂಗಾಳ ಕ್ರಿಕೆಟ್ ಸಂಸ್ಥೆಯ (ಸಿಎಬಿ) ಜವಾಬ್ದಾರಿ ವಹಿಸಿಕೊಳ್ಳಲು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಹಿಂದೇಟು ಹಾಕಿದ್ದಾರೆ. ಸಿಎಬಿಯ ನೂತನ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಹಿರಿಯ ಸಹೋದರ ಸ್ನೇಹಶಿಶ್ ಗಂಗೂಲಿ ನೇಮಕಗೊಳ್ಳಲಿದ್ದಾರೆ.
ಸಿಎಬಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ ಸೌರವ್ ಗಂಗೂಲಿ ಕಳೆದ ವಾರ ಹೇಳಿದ್ದು, ಇದೀಗ ನಿರ್ಧಾರ ಬದಲಿಸಿಕೊಂಡಿದ್ದಾರೆ. ಚುನಾವಣೆ ನಡೆದಲ್ಲಿ ಮಾತ್ರ ಸ್ಥಾನಕ್ಕೆ ಸ್ಪರ್ಧಿಸುವ ಒಲವು ಹೊಂದಿದ್ದೇನೆ. ಆದರೆ ಪ್ರಸ್ತುತ ಸಿಎಬಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಬದಲು ಅವಿರೋಧ ಆಯ್ಕೆಯೇ ನಡೆಯುವುದರಿಂದ ಆ ಸ್ಥಾನದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಗಂಗೂಲಿ ತಿಳಿಸಿರುವುದಾಗಿ ವರದಿಯಾಗಿದೆ.
ಅವಿರೋಧ ಆಯ್ಕೆ ನಡೆಯುವುದರಿಂದ ನಾನು ಎರಡನೇ ಬಾರಿಯೂ ಅಧ್ಯಕ್ಷನಾಗುವುದು ಸರಿಯಲ್ಲ ಎಂಬ ಭಾವನೆಯಿಂದ ಸ್ಥಾನವನ್ನು ಬಿಟ್ಟುಕೊಡುತ್ತಿರುವುದಾಗಿ ಮತ್ತು ಇತರರಿಗೂ ಬಂಗಾಳ ಕ್ರಿಕೆಟ್ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಲು ಅವಕಾಶ ಸಿಗಲಿ ಎಂಬ ಕಾರಣದಿಂದಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಅಕ್ಟೋಬರ್ 31ರಂದು ಬಂಗಾಳ ಕ್ರಿಕೆಟ್ ಸಂಸ್ಥೆಯ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯಲಿದೆ. ಪ್ರಸ್ತುತ ಸಂಸ್ಥೆಯ ಕಾರ್ಯದರ್ಶಿಯಾಗಿರುವ ಸ್ನೇಹಶಿಶ್ ಅವರು ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಲಿದ್ದಾರೆ. ಅಮಲೇಂದು ಬಿಸ್ವಾಸ್ ಉಪಾಧ್ಯಕ್ಷ ಹಾಗೂ ನರೇಶ್ ಓಜಾ ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.