ಸಿಡ್ನಿ, ಅ 26 (DaijiworldNews/DB): ಟಿ 20 ವಿಶ್ವಕಪ್ನಲ್ಲಿ ಪಾಕ್ ವಿರುದ್ದ ರೋಚಕ ಜಯ ಸಾಧಿಸಿದ ಟೀಂ ಇಂಡಿಯಾ ಇದೀಗ ಎರಡನೇ ಪಂದ್ಯಕ್ಕಾಗಿ ಸಿಡ್ನಿಯಲ್ಲಿ ಅಭ್ಯಾಸನಿರತವಾಗಿದೆ. ಇದೇ ವೇಳೆ ಟೀಂ ಇಂಡಿಯಾ ಆಟಗಾರರಿಗೆ ನೀಡಿದ ಆಹಾರದ ಗುಣಮಟ್ಟದ ಬಗ್ಗೆ ರೋಹಿತ್ ಪಡೆ ಅಸಮಾಧಾನಗೊಂಡಿದೆ.
ಗುಣಮಟ್ಟದ ಆಹಾರ ನೀಡದಿರುವುದು ಮತ್ತು ತಣ್ಣಗಿನ ಆಹಾರ ನೀಡಿದ್ದಕ್ಕೆ ಟೀಂ ಇಂಡಿಯಾ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ. ಅಲ್ಲದೆ ಭಾರತ ತಂಡ ಊಟೋಪಚಾರದ ವಿಷಯವಾಗಿ ಬಿಸಿಸಿಐಗೆ ದೂರು ನೀಡಿದೆ. ಅಭ್ಯಾಸದ ನಂತರ ಟೀಂ ಇಂಡಿಯಾ ಆಟಗಾರರಿಗೆ ತಣ್ಣಗಿನ ಆಹಾರ ನೀಡಲಾಗಿತ್ತು, ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಆಟಗಾರರು ಕ್ರೀಡಾಂಗಣದಲ್ಲಿ ಆಹಾರ ಸೇವನೆ ಮಾಡಿಲ್ಲ, ಕೇವಲ ಹಣ್ಣು ಹಂಪಲು ತಿಂದು ಅಲ್ಲಿಂದ ಸೀದಾ ತಾವು ತಂಗಿರುವ ಹೊಟೇಲ್ಗೆ ತೆರಳಿ ಅಲ್ಲೇ ಆಹಾರ ಸೇವಿಸಿದ್ದಾರೆ ಎನ್ನಲಾಗಿದೆ.
ಅಕ್ಟೋಬರ್ 27ರಂದು ನೆದರ್ಲ್ಯಾಂಡ್ಸ್ ವಿರುದ್ದ ಭಾರತ ತಂಡ ಎರಡನೇ ಪಂದ್ಯವನ್ನು ಆಡಲಿದ್ದು, ಅದಕ್ಕಾಗಿ ಸಿಡ್ನಿಯಲ್ಲಿ ಭರ್ಜರಿ ಅಭ್ಯಾಸ ನಡೆಯುತ್ತಿದೆ. ನೆದರ್ಲ್ಯಾಂಡ್ಸ್ ವಿರುದ್ದ ಗೆಲುವಿನ ನಿರೀಕ್ಷೆಯಲ್ಲಿರುವ ಭಾರತ ತಂಡ ಗೆಲುವಿನ ಉತ್ಸಾಹದೊಂದಿಗೆ ಅಭ್ಯಾಸನಿರತವಾಗಿದೆ.