ಸಿಡ್ನಿ, ಅ 27 (DaijiworldNews/SM): ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ನೆದರ್ಲ್ಯಾಂಡ್ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಆ ಮೂಲಕ ಟೂರ್ನಿಯಲ್ಲಿ ಸತತ ಎರಡು ಪಂದ್ಯಗಳನ್ನು ಭಾರತ ಗೆದ್ದುಕೊಂಡಂತಾಗಿದೆ.
ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ನಿಗದಿತ ಓವರ್ ನಲ್ಲಿ 2 ವಿಕೆಟ್ ನಷ್ಟಕ್ಕೆ 179 ರನ್ ಪೇರಿಸಿತ್ತು. ಟೀಂ ಇಂಡಿಯಾ ಪರ ರೋಹಿತ್ ಶರ್ಮಾ 53, ವಿರಾಟ್ ಕೊಹ್ಲಿ ಅಜೇಯ 62 ಹಾಗೂ ಸೂರ್ಯಕುಮಾರ್ ಯಾದವ್ ಅಜೇಯ 51 ರನ್ ಪೇರಿಸಿದ್ದರು.
ಇನ್ನು ಇತ್ತ ಭಾರತ ನೀಡಿದ 180 ರನ್ ಗಳ ಗುರಿ ಬೆನ್ನಟ್ಟಿದ ನೆದರ್ಲ್ಯಾಂಡ್ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದ 56 ರನ್ ಅಂತರದ ಸೋಲುಂಡಿತು.
ನೆದರ್ಲ್ಯಾಂಡ್ ಪರ ವಿಕ್ರಮ್ಜಿತ್ ಸಿಂಗ್ 1, ಮ್ಯಾಕ್ಸ್ ಒ'ಡೌಡ್ 16, ಬಾಸ್ ಡಿ ಲೀಡೆ 16, ಕಾಲಿನ್ ಅಕರ್ಮನ್ 17, ಟಿಮ್ ಪ್ರಿಂಗಲ್ 20, ಶರೀಜ್ ಅಹ್ಮದ್ ಅಜೇಯ 16 ರನ್ ಬಾರಿಸಿದ್ದಾರೆ.
ಟೀಂ ಇಂಡಿಯಾ ಪರ ಬೌಲಿಂಗ್ ನಲ್ಲಿ ಭುವನೇಶ್ವರ್ ಕುಮಾರ್, ಅರ್ಷ್ ದೀಪ್ ಸಿಂಗ್, ಅಕ್ಸರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ತಲಾ 2 ವಿಕೆಟ್ ಹಾಗೂ ಮೊಹಮ್ಮದ್ ಶಮಿ 1 ವಿಕೆಟ್ ಪಡೆದಿದ್ದಾರೆ.