ನವದೆಹಲಿ, ಅ 29 (DaijiworldNews/DB): ಭಾರತ ಮಹಿಳಾ ಕ್ರಿಕೆಟಿಗರಿಗೆ ಪುರುಷ ಆಟಗಾರರಷ್ಟೇ ಸಂಭಾವನೆ ನೀಡುವ ಬಿಸಿಸಿಐ ನಿರ್ಧಾರಕ್ಕೆ ಪ್ರಶಂಸೆಯ ಸುರಿಮಳೆಯೇ ಬರುತ್ತಿದೆ. ಬಾಲಿವುಡ್ ಮಂದಿ, ಕ್ರಿಕೆಟ್ ದಿಗ್ಗಜರು ಸೇರಿದಂತೆ ಹಲವರು ಬಿಸಿಸಿಐ ಕ್ರಮವನ್ನು ಶ್ಲಾಘಿಸಿದ್ದಾರೆ.
ಸಮಾನ ವೇತನ ನಿರ್ಧಾರವನ್ನು ಭಾರತೀಯ ಕ್ರಿಕೆಟ್ ಮಂಡಳಿ ಕಾರ್ಯದರ್ಶಿ ಜಯ ಶಾ ಅವರು ಟ್ವಿಟರ ಸೇರಿದಂತೆ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಗುರುವಾರ ಪ್ರಕಟಿಸಿದ್ದರು. ಬಿಸಿಸಿಐಯ ಈ ನಿರ್ಧಾರಕ್ಕೆ ಇದೀಗ ಹಲವಾರು ಮಂದಿ ಪ್ರಶಂಸೆ ವ್ಯಕ್ತಪಡಿಸಿದ್ದು, ಇತರ ಕ್ಷೇತ್ರಗಳಲ್ಲಿಯೂ ಮುಂದೆ ಇದೇ ಕ್ರಮ ಅನುಸರಿಸಲು ಉತ್ತಮ ವೇದಿಕೆಯನ್ನು ಬಿಸಿಸಿಐ ಒದಗಿಸಿಕೊಟ್ಟಿದೆ ಎಂದು ಹೇಳಿಕೊಂಡಿದ್ದಾರೆ.
ಬಾಲಿವುಡ್ ನಟ ಶಾರುಖ್ ಖಾನ್ ಅವರು ಎಂತಹ ಒಳ್ಳೆ ನಿರ್ಧಾರವಿದು ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಇನ್ನು ಇತರರು ಕೂಡಾ ಇದನ್ನು ಅನುಸರಿಸಲು ಒಂದೊಳ್ಳೆ ದಾರಿಯನ್ನು ಬಿಸಿಸಿಐ ನೀಡಿದೆ ಎಂದೂ ಅವರು ಹೇಳಿದ್ದಾರೆ. ಇನ್ನು ಸಮಾನತೆ ಮತ್ತು ವೇತನ ಸಮಾನತೆ ಖಾತ್ರಿಗೆ ಬಿಸಿಸಿಐ ನಿರ್ಧಾರ ಬಹು ಉತ್ತಮವಾಗಿದೆ. ಹಲವುಗಳಲ್ಲಿ ಇದು ನಮಗೆ ಮೊದಲನೆಯದು ಎಂಬುದು ನನ್ನ ಭಾವನೆ ಎಂಬುದಾಗಿ ನಟಿ ಪ್ರಿಯಾಂಕಾ ಚೋಪ್ರಾ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ಕೂಡಾ ಬಿಸಿಸಿಐನ ಪ್ರಕಟಣೆಯನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಚಪ್ಪಾಳೆ ಹೊಡೆಯುವ ಇಮೋಜಿ ಹಾಕಿ ಬಿಸಿಸಿಐ ಕ್ರಮವನ್ನು ಶ್ಲಾಘಿಸಿದ್ದಾರೆ. ನಟರಾದ ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ, ನಟಿ ತಾಪ್ಸಿ ಪನ್ನು ಸೇರಿದಂತೆ ಹಲವರು ಬಿಸಿಸಿಐ ನಿರ್ಧಾರವನ್ನು ಕೊಂಡಾಡಿದ್ದಾರೆ.
ನೂತನ ನಿಯಮಾನುಸಾರ ಪುರುಷ ಆಟಗಾರರಷ್ಟೇ ಸಮಾನ ಸಂಭಾವನೆಯನ್ನು ಮಹಿಳಾ ಕ್ರಿಕೆಟಿಗರು ಕೂಡಾ ಪಡೆಯಲಿದ್ದಾರೆ. ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂ., ಏಕದಿನ ಪಂದ್ಯಕ್ಕೆ 6 ಲಕ್ಷ ರೂ., ಹಾಗೂ ಟಿ20 ಪಂದ್ಯಕ್ಕೆ 3 ಲಕ್ಷ ರೂ. ಗಳನ್ನು ಕ್ರಿಕೆಟ್ ಆಟಗಾರ್ತಿಯರು ಪಡೆದುಕೊಳ್ಳಲಿದ್ದಾರೆ.