ಪರ್ತ್, ಅ 30 (DaijiworldNews/SM): ಕಳೆದ ಎರಡು ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿದ್ದ ಟೀಂ ಇಂಡಿಯಾ ರೋಚಕ ಘಟ್ಟದಲ್ಲಿ ದ.ಆಫ್ರಿಕಾ ವಿರುದ್ಧ ಸೋಲನುಭವಿಸಿದೆ. ಆ ಮೂಲಕ ಪಾಕಿಸ್ತಾನದ ಸೆಮಿಫೈನಲ್ ಹಾದಿ ಕಲ್ಲುಮುಳ್ಳಿನದ್ದಾಗಿದೆ.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಪಾಕಿಸ್ತಾನ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲ್ಲಲಿ ಎಂದು ಪ್ರಾರ್ಥನೆ ಮಾಡಿತ್ತು. ಆದರೆ ಇಂದಿನ ಪಂದ್ಯದಲ್ಲಿ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಸೋಲು ಕಂಡಿದ್ದು ಈ ಮೂಲಕ ಪಾಕಿಸ್ತಾನದ ಸೆಮಿಫೈನಲ್ ಕನಸು ಮತ್ತಷ್ಟು ಕಗ್ಗಂಟಾಗಿದೆ.
ಪರ್ತ್ ನಲ್ಲಿ ನಡದೆ ಆಫ್ರಿಕಾ ಮತ್ತು ಭಾರತ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಹರಣಿಗಳ ಬೌಲಿಂಗ್ ದಾಳಿಗೆ ತತ್ತರಿಸಿದ್ದು, ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 133 ರನ್ ಪೇರಿಸಿತ್ತು. ಭಾರತ ನೀಡಿದ ಅಲ್ಪಮೊತ್ತ ಗುರಿಯನ್ನು ಬೆನ್ನಟ್ಟಿದ ಆಫ್ರಿಕಾ ತಂಡ ಆರಂಭಿಕ ಹಿನ್ನಡೆ ಅನುಭವಿಸಿದರೂ ಮಾರ್ಕ್ರಾಮ್ ಮತ್ತು ಡೇವಿಡ್ ಮಿಲ್ಲರ್ ಉತ್ತಮ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಟೀಂ ಇಂಡಿಯಾ ಪರ ಕೆಎಲ್ ರಾಹುಲ್ 9, ರೋಹಿತ್ ಶರ್ಮಾ 15, ವಿರಾಟ್ ಕೊಹ್ಲಿ 12 ಮತ್ತು ಸೂರ್ಯಕುಮಾರ್ ಯಾದವ್ 68 ರನ್ ಪೇರಿಸಿದ್ದಾರೆ.
ದಕ್ಷಿಣ ಆಫ್ರಿಕಾ ಪರ ಡಿಕಾಕ್ 1, ಬವುಮಾ 10, ಮಾರ್ಕ್ರಾಮ್ 52, ಡೇವಿಡ್ ಮಿಲ್ಲರ್ ಅಜೇಯ 59 ರನ್ ಪೇರಿಸಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಯ ಗ್ರೂಪ್ 2ರಲ್ಲಿ 5 ಅಂಕಗಳೊಂದಿಗೆ ದಕ್ಷಿಣ ಆಫ್ರಿಕಾ ಅಗ್ರಸ್ಥಾನದಲ್ಲಿದ್ದರೆ ಟೀಂ ಇಂಡಿಯಾ ನಾಲ್ಕು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇನ್ನು 2 ಅಂಕ ಗಳಿಸಿರುವ ಪಾಕಿಸ್ತಾನ ಐದನೇ ಸ್ಥಾನದಲ್ಲಿದೆ.