ಪರ್ತ್, ಅ 31 (DaijiworldNews/DB): ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬ ಕೊಹ್ಲಿ ಉಳಿದುಕೊಂಡಿರುವ ಹೊಟೇಲ್ನ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಕಿಂಗ್ ಕೊಹ್ಲಿ ಗರಂ ಆಗಿದ್ದಾರೆ. ವೀಡಿಯೋ ಹಂಚಿಕೊಂಡಿರುವುದರಿಂದ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಕೊಹ್ಲಿ ಸದ್ಯ ಆಸ್ಟ್ರೇಲಿಯಾದಲ್ಲಿದ್ದಾರೆ. ಅಲ್ಲಿ ಅವರು ತಂಗಿರುವ ಹೊಟೇಲ್ನ ವೀಡಿಯೋವನ್ನು ಕೊಹ್ಲಿ ಅಭಿಮಾನಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಆದರೆ ಇದಕ್ಕೆ ಕೊಹ್ಲಿ ಸಿಟ್ಟಾಗಿದ್ದಾರೆ. ಇಂತಹ ವೀಡಿಯೋಗಳು ಖಾಸಗಿತನಕ್ಕೆ ಧಕ್ಕೆಯುಂಟು ಮಾಡುತ್ತವೆ ಎಂದು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಅಭಿಮಾನಿಗಳು ತಮ್ಮಿಷ್ಟದ ಆಟಗಾರರ ಭೇಟಿಗೆ, ನೋಡುವಕ್ಕಾಗಿ ಹಾತೊರೆಯುತ್ತಾರೆಂಬುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ ಇಂತಹ ವೀಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವುದು ಸಮಂಜಸವಲ್ಲ. ಇದು ಖಾಸಗಿತನಕ್ಕೆ ಧಕ್ಕೆಯಾಗುತ್ತದೆ. ನನ್ನ ರೂಂನಲ್ಲಿಯೂ ನನಗೆ ಖಾಸಗಿತನವಿಲ್ಲ ಎಂದಾದಲ್ಲಿ ಅದನ್ನು ಇನ್ನೆಲ್ಲಿ ಕಂಡುಕೊಳ್ಳಬೇಕು? ಇಂತಹ ಅಂಧಾಭಿಮಾನವನ್ನು ನಾನು ಸಹಿಸುವುದಿಲ್ಲ ಎಂದು ಖಾರವಾಗಿಯೇ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. ಇತರರ ಖಾಸಗಿ ತನವನ್ನು ಗೌರವಿಸಿ, ಮನರಂಜನೆಯ ವಸ್ತುವಾಗಿ ಅದನ್ನು ಬಳಸಿಕೊಳ್ಳಬೇಡಿ ಎಂದು ಇದೇ ವೇಳೆ ಕೊಹ್ಲಿ ಮನವಿ ಮಾಡಿದ್ದಾರೆ.
ಇನ್ನು ಕೊಹ್ಲಿ ಪೋಸ್ಟ್ಗೆ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಹಲವರು ಬೆಂಬಲಿಸಿದ್ದು, ಇಂತಹ ಅರ್ಥಹೀನ ಚಟುವಟಿಕೆಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.