ನವದೆಹಲಿ, ನ 03 (DaijiworldNews/DB): ಮುಂದಿನ ಐಪಿಎಲ್ಗಾಗಿ ಈಗಿಂದಲೇ ಸಿದ್ದತೆಗಳು ಆರಂಭವಾಗಿದ್ದು, ಪಂಜಾಬ್ ಕಿಂಗ್ಸ್ನಲ್ಲಿ ನಾಯಕತ್ವ ಬದಲಾವಣೆಯೂ ನಡೆದು ಹೋಗಿದೆ. ಕನ್ನಡಿಗ ಮಯಾಂಕ್ ಅಗರ್ವಾಲ್ ಬದಲು ಭಾರತ ಏಕದಿನ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಅವರನ್ನು ಪಂಜಾಬ್ ಕಿಂಗ್ಸ್ನ ನೂತನ ನಾಯಕರನ್ನಾಗಿ ನೇಮಿಸಲಾಗಿದೆ.
ಐಪಿಎಲ್-2023ರ ಹರಾಜಿಗಾಗಿ ಬಿಸಿಸಿಐ ವ್ಯವಸ್ಥೆ ಮಾಡುತ್ತಿದೆ. ಈ ನಡುವೆ ಪ್ರಾಂಚೈಸಿಗಳೂ ತಂಡಗಳ ಬಗ್ಗೆ ಚರ್ಚೆಯಲ್ಲಿ ತೊಡಗಿರುವಂತೆಯೇ ಪಂಜಾಬ್ ಕಿಂಗ್ಸ್ನಲ್ಲಿ ನಾಯಕತ್ವ ಬದಲಾವಣೆಯೂ ನಡೆದಿದೆ. ಈ ವಿಚಾರವನ್ನು ಪಂಜಾಬ್ ಕಿಂಗ್ಸ್ ತಂಡವು ಬುಧವಾರ ರಾತ್ರಿ ತಿಳಿಸಿದೆ. ಆದರೆ ಇದೇ ವೇಳೆ ಮಯಾಂಕ್ ಅವರನ್ನು ಪಂಜಾಬ್ ಕಿಂಗ್ಸ್ ತನ್ನಲ್ಲಿಯೇ ಉಳಿಸಿಕೊಳ್ಳಲಿದೆಯೇ ಇಲ್ಲವೇ ಎಂಬುದು ಗೊತ್ತಾಗಿಲ್ಲ. ನವೆಂಬರ್ 15ರೊಳಗೆ ತಂಡಗಳು ತಮ್ಮಲ್ಲಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಐಪಿಎಲ್ಗೆ ಸಲ್ಲಿಸಬೇಕಿದ್ದು, ಆ ಬಳಿಕ ಮಯಾಂಕ್ರನ್ನು ಪಂಜಾಬ್ ತಂಡ ಉಳಿಸಿಕೊಂಡಿದೆಯೇ ಇಲ್ಲವೇ ಎಂಬುದು ತಿಳಿದು ಬರಲಿದೆ.
ಕೆ.ಎಲ್. ರಾಹುಲ್ ತಂಡ ತೊರೆದ ಹಿನ್ನೆಲೆಯಲ್ಲಿ ಪಂಜಾಬ್ ಕಿಂಗ್ಸ್ ನಾಯನನ್ನಾಗಿ ಕಳೆದ ವರ್ಷ ಮಯಾಂಕ್ರನ್ನು ನೇಮಿಸಲಾಗಿತ್ತು. ಆದರೆ ತಂಡ ಯಶಸ್ಸು ಪಡೆದಿರಲಿಲ್ಲ ಮತ್ತು ಪ್ಲೇ ಆಫ್ಗೂ ಎಂಟ್ರಿ ಕೊಟ್ಟಿರಲಿಲ್ಲ. ಆ ಬಳಿಕ ಅನಿಲ್ ಕುಂಬ್ಳೆ ಬದಲಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ತರಬೇತುದಾರರಾಗಿದ್ದ ಬೇಲಿಸ್ ಅವರನ್ನು ತಂಡ ಕೋಚ್ ಆಗಿ ಆಯ್ಕೆ ಮಾಡಿಕೊಂಡಿತ್ತು.
ಕಳೆದ ವರ್ಷ ನಡೆದ ಮೆಗಾ ಹರಾಜಿನಲ್ಲಿ ಶಿಖರ್ ಧವನ್ ಅವರನ್ನು ಪಂಜಾಬ್ ಕಿಂಗ್ಸ್ ತಂಡ ಖರೀದಿ ಮಾಡಿತ್ತು.