ಆಸ್ಟ್ರೇಲಿಯಾ, ನ 04 (DaijiworldNews/DB): ಆಸಿಸ್ ನೆಲದಲ್ಲಿ ಟಿ20 ವಿಶ್ವಕಪ್ ಭರ್ಜರಿಯಾಗಿಯೇ ನಡೆಯುತ್ತಿದ್ದು, ವಿವಿಧ ರಾಷ್ಟ್ರಗಳ ಕ್ರಿಕೆಟ್ ತಂಡಗಳು ಬಿರುಸಿನ ಆಟದಲ್ಲಿ ತೊಡಗಿವೆ. ಈ ನಡುವೆ ಐರ್ಲೆಂಡ್ ತಂಡವು ವಿಶೇಷ ಸಾಧನೆಯೊಂದಕ್ಕೆ ಮುನ್ನುಡಿ ಬರೆದಿದೆ.
ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡು ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಐರ್ಲೆಂಡ್ ಪಾತ್ರವಾಗಿದೆ. ಐರ್ಲೆಂಡ್ನ 23ರ ಹರೆಯದ ವೇಗಿ ಜೋಶ್ ಲಿಟಲ್ ಶುಕ್ರವಾರ ನ್ಯೂಜಿಲೆಂಡ್ನ ಕೇನ್ ವಿಲಿಯಮ್ಸನ್, ಜಿಮ್ಮಿ ನೀಶಮ್ ಮತ್ತು ಮಿಚೆಲ್ ಸ್ಯಾಂಟ್ನರ್ ಅವರನ್ನು ಪರಾಭವಗೊಳಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಐರ್ಲೆಂಡ್ನ ಎರಡನೇ ಹ್ಯಾಟ್ರಿಕ್ ಪಡೆದರು. ಇದೇ ವೇಳೆ ಕರ್ಟಿಸ್ ಕ್ಯಾಂಫರ್ ಟಿ 20 ವಿಶ್ವಕಪ್ ಹ್ಯಾಟ್ರಿಕ್ ಪಡೆದ ಮೊದಲ ಐರಿಶ್ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರು 2021ರ ಟಿ 20 ವಿಶ್ವಕಪ್ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಕೂಡಾ ಹ್ಯಾಟ್ರಿಕ್ ಪಡೆದಿದ್ದರು.
ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 16ರಂದು ಆರಂಭವಾದ ಟಿ20 ವಿಶ್ವಕಪ್ ನವೆಂಬರ್ 13ರವರೆಗೆ ನಡೆಯಲಿದೆ. ಈಗಾಗಲೇ ಹಲವು ರೋಚಕ ಪಂದ್ಯಗಳು, ಅಚ್ಚರಿಯ ಫಲಿತಾಂಶಗಳೊಂದಿಗೆ ಕ್ರಿಕೆಟ್ ಪ್ರೇಮಿಗಳ ಕುತೂಹಲವನ್ನು ಇನ್ನಷ್ಟು ಹೆಚ್ಚಿಸುತ್ತಿವೆ.