ನವದೆಹಲಿ, ನ 05 (DaijiworldNews/DB): ಇಂದು (ನವೆಂಬರ್ 5) ತಮ್ಮ 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರಕೈಯಲ್ಲಿರುವ ಟ್ಯಾಟೂಗಳೆಷ್ಟು ಗೊತ್ತೇ? ಒಂದಲ್ಲ, ಎರಡಲ್ಲ..ಬರೋಬ್ಬರಿ 11! ಕೊಹ್ಲಿ ಕೈಯಲ್ಲಿರುವ ಒಂದೊಂದು ಟ್ಯಾಟೂ ಹಿಂದೆ ಒಂದೊಂದು ಕತೆ ಇದೆ.
ಆಟಗಳಷ್ಟೇ ಟ್ಯಾಟೂಗಳಿಂದಲೂ ಜನಪ್ರಿಯರಾಗಿರುವ ಕಿಂಗ್ ಕೊಹ್ಲಿ ಅವರಿಗೆ ಟ್ಯಾಟೂಗಳೆಂದರೆ ಅಚ್ಚುಮೆಚ್ಚು. ಹೀಗಾಗಿ ಅರ್ಥಗರ್ಭಿತ ಟ್ಯಾಟೂಗಳನ್ನು ಕೈಯಲ್ಲಿ ಹಾಕಿಕೊಂಡಿದ್ದಾರೆ. ಕೊಹ್ಲಿ ತಂದೆ ಪ್ರೇಮ್ ಕೊಹ್ಲಿಯವರು ತಮ್ಮ 18 ನೇ ವರ್ಷದಲ್ಲಿ ನಿಧನರಾದ್ದರಿಂದ ಮಗನ ಜನಪ್ರಿಯತೆ ನೋಡಲು ಅವರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ತಂದೆ ಮತ್ತು ತಾಯಿಯ ಹೆಸರನ್ನು ತನ್ನ ಬಲಭುಜದ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಕೊಹ್ಲಿ.
ಇನ್ನು ಏಕದಿನದಲ್ಲಿ 175ನೇ ಹಾಗೂ ಟೆಸ್ಟ್ನಲ್ಲಿ 269ನೇ ಆಟಗಾರನಾಗಿ ಟೀಂ ಇಂಡಿಯಾಕ್ಕೆ ಪಾದಾರ್ಪಣೆ ಮಾಡಿದ ನೆನಪಿಗಾಗಿ ಇದೇ ಸಂಖ್ಯೆಗಳನ್ನು ಹಚ್ಚೆ ಹಾಕಿದ್ದಾರೆ. ಎಡಭುಜದ ಮೇಲೆ ಕಣ್ಣಿನಾಕಾರ ಟ್ಯಾಟೂ ಹಾಕಿಸಿಕೊಂಡಿರುವ ಕೊಹ್ಲಿ ಅದನ್ನು ದೇವರ ಕಣ್ಣು ಎಂದೇ ಕರೆಯುತ್ತಾರೆ. ಉತ್ತಮ ನಡವಳಿಕೆಗೆ ಈ ಕಣ್ಣು ಅವರಿಗೆ ಸಹಾಯ ಮಾಡುತ್ತಂತೆ. ಇನ್ನು ಓಂಕಾರ ಟ್ಯಾಟೂವನ್ನು ಹಾಕಿಸಿಕೊಂಡಿರುವ ಕೊಹ್ಲಿಗೆ ಈ ಟ್ಯಾಟೂ ತುಂಬಾ ಶಕ್ತಿ ನೀಡುತ್ತದೆಯಂತೆ. ಕೊಹ್ಲಿಯ ರಾಶೀಯಾದ ಸ್ಕಾರ್ಪಿಯೋವನ್ನು ಮೊಣಕೈ ಮೇಲೆ ಹಾಕಿಸಿಕೊಂಡಿದ್ದಾರೆ.
ಮಧ್ಯಕಾಲೀನ ಜಪಾನ್ನಲ್ಲಿ ಯೋಧನಾಗಿ ದೇಶ ರಕ್ಷಣೆ ಮಾಡಿದ್ದ ಸಮುದಾಯ್ನ ಟ್ಯಾಟೂವನ್ನೂ ಕೊಹ್ಲಿ ತನ್ನ ಕೈಮೇಲೆ ಮುದ್ರಿಸಿಕೊಂಡಿರುವುದು ವಿಶೇಷ. ಬಾಲ್ಯದಿಂದಲೂ ಶಿವಭಕ್ತನಾಗಿರುವ ಕೊಹ್ಲಿ ಶಿವನ ಧ್ಯಾನಿಯೂ ಹೌದು. ಹೀಗಾಗಿ ತನ್ನ ತೋಳಿನ ಮೇಲೆ ಶಿವನ ಹಚ್ಚೆ ಹಾಕಿಸಿದ್ದಾರೆ. ಇನ್ನು ಶಿವನ ಪಕ್ಕದಲ್ಲೇ ಆಶ್ರಮದ ರಚನೆ ಹೋಲುವ ಟ್ಯಾಟೂವನ್ನೂ ಹಾಕಿಸಿಕೊಂಡಿದ್ದಾರೆ. ಕೊಹ್ಲಿ ಶಾಂತಿಪ್ರಿಯ ಎಂಬುದಕ್ಕೆ ಈ ಟ್ಯಾಟೂ ನಿದರ್ಶನದಂತಿದೆ.
ಇನ್ನು ಕೊನೆಯದಾಗಿ ತನ್ನ ಆಕ್ರಮಣಶೀಲತೆಯನ್ನು ಪ್ರತಿನಿಧಿಸುವ ಬುಡಕಟ್ಟು ಎಂಬ ಟ್ಯಾಟೂವನ್ನೂ ಕೊಹ್ಲಿ ತನ್ನ ಕೈಯಲ್ಲಿ ಮುದ್ರಿಸಿಕೊಂಡಿದ್ದಾರಂತೆ. ಈ ಟ್ಯಾಟೂ ಅವರ ತಂಡ ನಿಷ್ಠೆಯನ್ನೂ ತೋರಿಸುತ್ತದೆ ಎಂಬುದು ಕೊಹ್ಲಿ ಅಭಿಪ್ರಾಯ.