ಸಿಡ್ನಿ, ನ 06 (DaijiworldNews/DB): ಲೈಂಗಿಕ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ಶ್ರೀಲಂಕಾ ಬ್ಯಾಟರ್ ದನುಷ್ಕಾ ಗುಣತಿಲಕ ಅವರನ್ನು ಭಾನುವಾರ ಸಿಡ್ನಿ ಪೊಲೀಸರು ಬಂಧಿಸಿದ್ದಾರೆ.
29 ವರ್ಷದ ಮಹಿಳೆಯೊಬ್ಬರ ಮೇಲೆ ರೋಸ್ ಬೇಯಲ್ಲಿರುವ ನಿವಾಸದಲ್ಲಿ ಕೆಲ ದಿನಗಳ ಹಿಂದೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ದನುಷ್ಕಾ ಮೇಲಿತ್ತು. 31 ವರ್ಷದ ಗುಣತಿಲಕ ಆನ್ ಲೈನ್ ಡೇಟಿಂಗ್ ಅಪ್ಲಿಕೇಶನ್ನಲ್ಲಿ ಮಾತುಕತೆ ನಡೆಸಿ ನವೆಂಬರ್ 2ರ ಸಂಜೆ ತನ್ನ ಮೇಲೆ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂಬುದಾಗಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕ್ರಿಕೆಟಿಗನನ್ನು ಬಂಧಿಸಲಾಗಿದೆ ಎಂದು ನ್ಯೂ ಸೌತ್ ವೇಲ್ಸ್ ಪೊಲೀಸ್ ಹೇಳಿರುವುದಾಗಿ ವರದಿಯಾಗಿದೆ.
ಸಿಡ್ನಿಯ ಸಸೆಕ್ಸ್ ಸ್ಟ್ರೀಟ್ ನಲ್ಲಿರುವ ಹೋಟೆಲ್ನಲ್ಲಿ ಗುಣತಿಲಕ ಅವರನ್ನು ಬಂಧಿಸಿ ಸಿಡ್ನಿ ಸಿಟಿ ಪೋಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಒಪ್ಪಿಗೆಯಿಲ್ಲದೆ ನಡೆದ ದೌರ್ಜನ್ಯ ಇದಾಗಿದ್ದು, ಬಂಧನಕ್ಕೂ ಮುನ್ನ ಪ್ರಾಥಮಿಕ ತನಿಖೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಡಿರಜ್ಜು ಗಾಯದಿಂದ ನರಳುತ್ತಿದ್ದ ಗುಣತಿಲಕ ಟಿ20 ವಿಶ್ವಕಪ್ ನ ಮೊದಲ ಸುತ್ತಿನಲ್ಲಿ ಹೊರಬಿದ್ದಿದಿದ್ದರು.