ಅಡಿಲೇಡ್, ನ 08 (DaijiworldNews/DB): ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಮುಂಗೈಗೆ ಬಲವಾದ ಪೆಟ್ಟು ಬಿದ್ದಿದ್ದು, ಟೀಂ ಇಂಡಿಯಾಕ್ಕೆ ಹೊಸ ಆಘಾತ ಎದುರಾಗಿದೆ. ಗುರುವಾರ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟಿ 20 ವಿಶ್ವಕಪ್ನ ಸೆಮಿಫೈನಲ್ಗೂ ಮುನ್ನ ಶರ್ಮಾಗೆ ಗಾಯದ ಸಮಸ್ಯೆ ಉಂಟಾಗಿದೆ.
ಮಂಗಳವಾರ ಬೆಳಗ್ಗೆ ರೋಹಿತ್ ಶರ್ಮಾ ಅವರು ಇಂಡಿಯನ್ ನೆಟ್ ಸೆಷನ್ನಲ್ಲಿ ಎಸ್. ರಘು ಅವರಿಂದ ಸಾಂಪ್ರದಾಯಿಕ ಥ್ರೋಡೌನ್ಗಳನ್ನು ಎದುರಿಸುತ್ತಿದ್ದರು. ಈ ವೇಳೆ ಶಾರ್ಟ್ ಬಾಲ್ ಅವರ ಬಲಗೈಯ ಮುಂಗೈಗೆ ಬಡಿದಿದೆ. ಇದರಿಂದ ತೀವ್ರ ಗಾಯಕ್ಕೊಳಗಾದ ಶರ್ಮಾ ವಿಶ್ರಾಂತಿಗೆ ತೆರಳಿದರು. 150 ಪ್ಲಸ್ ವೇಗದಲ್ಲಿ 18 ಯಾರ್ಡ್ಗಳಿಂದ ಬಾಲ್ ಎಸೆಯಲ್ಪಟ್ಟಿತ್ತು. ಇದರಿಂದ ಶರ್ಮಾ ತೀವ್ರವಾದ ನೋವಿನಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ.
ನವೆಂಬರ್ 10ರಂದು ಗುರುವಾರ ಇಂಗ್ಲೆಂಡ್ ತಂಡದ ವಿರುದ್ಧ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಆಡಲಿದೆ. ಇಲ್ಲಿ ಗೆಲುವು ಸಾಧಿಸಿದರೆ ಪ್ರಶಸ್ತಿ ಸುತ್ತಿಗೆ ಭಾರತ ಆಯ್ಕೆಯಾಗಲಿದೆ. ಆದರೆ ಇದರ ನಡುವೆಯೇ ಶರ್ಮಾಗೆ ಗಾಯದ ಸಮಸ್ಯೆಯಾಗಿರುವುದು ಟೀಂ ಇಂಡಿಯಾವನ್ನು ಆಘಾತಕ್ಕೆ ಸಿಲುಕಿಸಿದೆ. ಆದರೆ ಗುರುವಾರದ ವೇಳೆಗೆ ಗಾಯ ಕಡಿಮೆಯಾಗುವ ಸಾಧ್ಯತೆ ಇದ್ದು, ಅವರು ತಂಡ ಸೇರಿಕೊಳ್ಳಲಿದ್ದು, ಬ್ಯಾಟಿಂಗ್ಗೆ ಮರಳಬಹುದು ಎನ್ನಲಾಗುತ್ತಿದೆ.