ನವದೆಹಲಿ, ನ 09 (DaijiworldNews/DB): ಮಿಸ್ಟರ್ 360 ಡಿಗ್ರಿ ಪ್ಲೇಯರ್ ಎಂದೇ ಖ್ಯಾತಿ ಪಡೆದಿರುವ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಅವರು ಮೈದಾನದ ಹೊರಗೂ, ಒಳಗೂ ಆಹಾರಕ್ರಮವನ್ನು ಪಾಲಿಸುವುದನ್ನು ಮರೆಯುವುದಿಲ್ಲ. ಬಹುಶಃ ವಿಶ್ವದ ನಂಬರ್ ಒನ್ ಟಿ20 ಅಂತಾರಾಷ್ಟ್ರೀಯ ಬ್ಯಾಟ್ಸ್ಮನ್ ಫಿಟ್ನೆಸ್ಗೂ ಅವರ ಆಹಾರಕ್ರಮವೇ ಕಾರಣವಾಗಿದೆ.
ಸೂರ್ಯಕುಮಾರ್ ಯಾದವ್ ಅವರು ಚೀಟ್ ಮೀಲ್ಗಳಿಂದ ಯಾವಾಗಲೂ ದೂರವಿರುತ್ತಾರೆ. ಹೆಚ್ಚಿನ ಕ್ಯಾಲೊರಿ ಒದಗಿಸುವ ಆಹಾರ ಸೇವನೆ ಅವರಲ್ಲಿ ನಿಷಿದ್ದ. ಹಾಗೆಯೇ ಕೆಫೀನ್ ಸೇವನೆ ವೇಳೆ ಕಡಿಮೆ ಕಾರ್ಬೋಹೈಡ್ರೇಟ್ಗಳಿಗೆ ಆದ್ಯತೆ. ಇನ್ನು ಸೂರ್ಯ ಅವರೊಂದಿಗೆ ಕೆಲಸ ಮಾಡಿರುವ ಖ್ಯಾತ ಆಹಾರ ತಜ್ಞೆ ಮತ್ತು ಕ್ರೀಡಾ ಪೌಷ್ಟಿಕ ತಜ್ಞೆ ಶ್ವೇತಾ ಭಾಟಿಯಾ ಅವರು ಕೆಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಕಳೆದೊಂದು ವರ್ಷದಿಂದ ಶ್ವೇತಾ, ಸೂರ್ಯರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಈ ಅವಧಿಯಲ್ಲಿ ಒಟ್ಟಾರೆ ಫಿಟ್ನೆಸ್ ಸುಧಾರಣೆಗಾಗಿಯೇ ಸೂರ್ಯ ಹೆಚ್ಚಿನ ಆದ್ಯತೆ ನೀಡುತ್ತಿದ್ದರಂತೆ. ಇನ್ನು ಸೂರ್ಯಕುಮಾರ್ ಅವರಿಗೆ ಕ್ರೀಡಾ ಪೌಷ್ಠಿಕಾಂಶದ ಬಗ್ಗೆ ಹೆಚ್ಚಿನ ತಿಳುವಳಿಕೆ ನೀಡಲು ಶ್ವೇತಾ ಶ್ರಮಿಸುತ್ತಿದ್ದಾರೆ. ಸೂರ್ಯ ಆಹಾರ ಕ್ರಮವು ಐದು ಅಂಶಗಳ ಅಜೆಂಡಾವನ್ನಾಧರಿಸಿ ಇರುತ್ತದೆಯಂತೆ. ಮೊದಲೆನಯದು ಪಂದ್ಯಗಳಲ್ಲಿ ತರಬೇತಿ ಮತ್ತು ಕಾರ್ಯಕ್ಷಮತೆ ಸುಧಾರಣೆ, ಎರಡನೆಯದು ಅಥ್ಲೆಟಿಕ್ ವಲಯದಲ್ಲಿ ದೇಹದ ಕೊಬ್ಬನ್ನು (12-15 ಪ್ರತಿಶತ) ಸಹಜ ಸ್ಥಿತಿಯಲ್ಲಿಡುವುದು, ಮೂರನೆಯದು ಚೈತನ್ಯಕ್ಕಾಗಿ ಡಯಟ್, ನಾಲ್ಕನೆಯಡು ದೇಹಕ್ಕೆ ಬೇಕಿರುವ ಅತ್ಯಗತ್ಯ ಶಕ್ತಿ ಕುಗ್ಗದಂತೆ ಗಮನ ಹರಿಸುವುದು ಮತ್ತು ಕೊನೆಯದಾಗಿ ಚೇತರಿಕೆಯನ್ನು ಉತ್ತೇಜಿಸುವಂತಹ ಆಹಾರ ಕ್ರಮ.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಸೂರ್ಯಕುಮಾರ್ ಅವರ ದೈನಂದಿನ ಆಹಾರ ಕ್ರಮ ಆರಂಭವಾಗುತ್ತದೆಯಂತೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಕಡಿಮೆ ಕಾರ್ಬೋಹೈಡ್ರೇಟ್ಗಳು ಕಾರ್ಯಕ್ಷಮತೆ ಸುಧಾರಣೆಗೆ ಸಹಕರಿಸುವುದರಿಂದ ಕಾರ್ಬೋಹೈಡ್ರೇಟ್ ಸೇವನೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿದ್ದಾರಂತೆ ಸೂರ್ಯ.
ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಫಿಟ್ನೆಸ್ ಬಗ್ಗೆ ಎಲ್ಲರಿಗೂ ತಿಳಿದ ವಿಚಾರವೇ. ಅವರೂ ಕೆಲ ದಿನಗಳ ಹಿಂದೆ ಸಸ್ಯಾಹಾರಿಯಾಗಿದ್ದು, ಜಂಕ್ಫುಡ್ ನಿಂದ ದೂರುವುಳಿದಿದ್ದಾರೆ. ಈಗ ಸೂರ್ಯಕುಮಾರ್ ಕೂಡಾ ಕೊಹ್ಲಿಯಂತೆಯೇ ಫಿಟ್ನೆಸ್ ಮಂತ್ರ ಪಠಿಸುತ್ತಿದ್ದಾರೆ. ಬಾದಾಮಿ, ಒಮೇಗಾ ತ್ರೀಯಂತಹ ಆರೋಗ್ಯಕರ ಕೊಬ್ಬುಗಳ ಸೇವನೆ ಸೂರ್ಯ ಆಹಾರಪಟ್ಟಿಯಲ್ಲಿವೆ ಎನ್ನುತ್ತಾರೆ ಶ್ವೇತಾ. ಐಸ್ಕ್ರೀಂ, ಮಟನ್ ಬಿರಯಾನಿ, ಪಿಜ್ಜಾದಂತಹ ಚೀಟ್ಮೀಲ್ಗಳನ್ನು ಅಪರೂಪಕ್ಕೊಮ್ಮೊಮ್ಮೆಯಷ್ಟೇ ಸೇವಿಸುತ್ತಿದ್ದಾರೆ ಎನ್ನುತ್ತಾರೆ ಅವರು.