ಮಂಗಳೂರು, ಮೇ 13 (DaijiworldNews/PY) : ಕೊರೊನಾ ಲಾಕ್ಡೌನ್ ಜಾರಿಯಲ್ಲಿರುವ ಕಾರಣ ದುಬೈಯಲ್ಲಿ ಅತಂತ್ರರಾಗಿದ್ದ ಅನಿವಾಸಿ ಕನ್ನಡಿಗರನ್ನು ಕರೆದುಕೊಂಡ ಬಂದ ವಿಮಾನವು ಮಂಗಳವಾರ ರಾತ್ರಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರೂ ಪ್ರಯಾಣಿಕರಿಗೆ ದ.ಕ ಜಿಲ್ಲಾಡಳಿತವು ಸರಿಯಾದ ವ್ಯವಸ್ಥೆ ಕಲ್ಪಿಸಿಕೊಟ್ಟಿಲ್ಲ ಎಂಬ ಆರೋಪಗಳು ಕೇಳಿ ಬಂದಿದೆ.
ದುಬೈನಿಂದ ಬಂದ ಗರ್ಭಿಣಿಯರಲ್ಲಿ ಓರ್ವ ಗರ್ಭಿಣಿ ಮಹಿಳೆ ದೈಜಿವರ್ಲ್ಡ್ ವಾಹಿನಿಗೆ ಕರೆ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
"ನಾನು ಮೇ 12ರಂದು ರಾತ್ರಿ 10.05ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದ್ದು ದುಬೈಯಿಂದ ವಿಮಾನ ನಿಲ್ದಾಣಕ್ಕೆ ಬರುವವರೆಗೂ ಯಾವುದೇ ತೊಂದರೆ ಇರಲಿಲ್ಲ. ನಾವು ತುಂಬಾ ನಿರೀಕ್ಷೆ ಮಾಡಿದ್ದೆವು. ಏಕೆಂದರೆ ಎಲ್ಲಾ ರೀತಿಯಾದ ವ್ಯವಸ್ಥೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿತ್ತು. ಆದರೆ ಮಂಗಳೂರಿಗೆ ಬಂದಾಗ ಯಾವುದೇ ರೀತಿಯಾದ ವ್ಯವಸ್ಥೆ ಇರಲಿಲ್ಲ. ನಾನು ಏಳುವರೆ ತಿಂಗಳ ಗರ್ಭಿಣಿ. ನಾನು ಬಂದ ವಿಮಾನ 10.05ಕ್ಕೆ ಮಂಗಳೂರಿಗೆ ತಲುಪಿತ್ತು. ಆದರೆ, ಅಲ್ಲಿಂದ ನಮ್ಮನ್ನು 2.10 ರ ವೇಳೆಗೆ ಹೊಟೇಲ್ಗೆ ಕಳುಹಿಸಿದ್ದಾರೆ. ನಾವು ಸುಮಾರು ನಾಲ್ಕು ಗಂಟೆಯ ಕಾಲ ಕಾದಿದ್ದೇವೆ. ಯಾವುದೇ ವಿಭಾಗದಲ್ಲಿ ಸರಿಯಾದ ವ್ಯವಸ್ಥೆ ಇರಲಿಲ್ಲ" ಎಂದು ತಿಳಿಸಿದ್ದಾರೆ.
"ನನ್ನ ಪತಿ ಅಲ್ಲಿ ಕೆಲಸ ಮಾಡುತ್ತಿರುವ ಕಾರಣ ನಾನು ದುಬೈಯಿಂದ ಒಬ್ಬಳೆ ಬಂದಿದ್ದೇನೆ. ವಿಮಾನ ನಿಲ್ದಾಣದಲ್ಲಿ ವ್ಯವಸ್ಥೆ ಸರಿಯಿರಲಿಲ್ಲ. ಅಲ್ಲದೇ ನಮ್ಮ ಲಗೇಜ್ಗಳನ್ನು ನಾವೇ ತೆಗೆದುಕೊಂಡು ಹೋಗಬೇಕಿತ್ತು. ನಾವು ಗರ್ಭಿಣಿ ಅಂತ ತಿಳಿದಿದ್ದರೂ ಯಾರೂ ಕೂಡಾ ನಮಗೆ ಸಹಾಯ ಮಾಡಲಿಲ್ಲ. ಊಟ ಉಚಿತವಾಗಿ ದೊರೆಯುತ್ತದೆ ಹೇಳಿದ್ದರು. ಆದರೆ ಊಟಕ್ಕಾಗಿ ಹೋದಾಗ ಅಲ್ಲಿ ಹಣ ಪಾವತಿ ಮಾಡಬೇಕಾಯಿತು. ನನ್ನ ಕೈಯಲ್ಲಿ ನಗದು ರೂಪದಲ್ಲಿ ಹಣ ಇರಲಿಲ್ಲ. ನಮಗೆ ಹಾಸ್ಟೆಲ್ ಹಾಗೂ ಹೊಟೇಲ್ ವ್ಯವಸ್ಥೆ ಮಾಡಲಾಗಿದೆ ಎಂದು ನಾವು ಮಾಧ್ಯಮದ ಮೂಲಕ ತಿಳಿದಿದ್ದೇವು. ಆದರೆ, ಹಾಸ್ಟೆಲ್ ಇರಲಿಲ್ಲ. ಹೊಟೇಲ್ ಕೂಡಾ ಬೇರೆ ಇರಲಿಲ್ಲ. ಒಂದೇ ಹೊಟೇಲ್ ಇತ್ತು. ಬೇರೆ ಯಾವುದೇ ಆಯ್ಕೆಗಳು ಇಲ್ಲದಿದ್ದಾಗ ನಾವು ಅದೇ ಹೊಟೇಲ್ ಅನ್ನು ಆಯ್ಕೆ ಮಾಡಿಕೊಳ್ಳಬೇಕಾಯಿತು. ಹೊಟೇಲ್ನ ದರ ಕೂಡಾ 1000 ಆಗಿತ್ತು. ಆ ದರಕ್ಕಿಂತ ಕಡಿಮೆಯಾದ ಯಾವುದೇ ಹೊಟೇಲ್ಗಳ ವ್ಯವಸ್ಥೆ ಇರಲಿಲ್ಲ" ಎಂದರು.
"ಹೊಟೇಲ್ಗಾಗಿ ತೆರಳುವ ವೇಳೆ ಕೆಎಸ್ಆರ್ಟಿಸಿ ಬಸ್ನ ವ್ಯವಸ್ಥೆ ಇತ್ತು. ಆದರೆ ಬಸ್ ವೇಗವಾಗಿ ಚಲಾಯಿಸಿದ್ದು ಅದರಿಂದಾಗಿ ಗರ್ಭಿಣಿಯಾದ ನನಗೆ ನೋವು ಕಾಣಿಸಿಕೊಂಡಿತು. ಆದ್ದ ಕಾರಣದಿಂದಾಗಿ ವೆನ್ಲಾಕ್ ಆಸ್ಪತ್ರೆಗೆ ತಪಾಸಣೆಗಾಗಿ ಬಂದಿದ್ದೇನೆ. ಮನೆಯವರು ಯಾರೂ ಕೂಡಾ ಬರುವಂತಿಲ್ಲ ಎಂದು ಹೇಳಿರುವ ಕಾರಣದಿಂದಾಗಿ ಈಗ ನನ್ನೊಂದಿಗೆ ಮನೆಯವರು ಯಾರೂ ಇಲ್ಲ. ನಾನೊಬ್ಬಳ್ಳೆ ಆಂಬುಲೆನ್ಸ್ ಸಿಬ್ಬಂದಿಗಳ ಜೊತೆ ಆಸ್ಪತ್ರೆಗೆ ಬಂದಿದ್ದೇನೆ. ನಾನು ಗರ್ಭಿಣಿ ಆಗಿರುವ ಕಾರಣ ಈಗ ಒಬ್ಬಳ್ಳೆ ಇರಲು ಸಾಧ್ಯವಾಗುತ್ತಿಲ್ಲ ನನ್ನೊಂದಿಗೆ ಯಾರಾದರೂ ಇರಬೇಕಾಗುತ್ತದೆ. ಈ ಕುರಿತಾಗಿ ಅಧಿಕಾರಿಗಳ ಗಮನಕ್ಕೆ ತರಬೇಕಾಗಿದೆ" ಎಂದು ದಾಯ್ಜಿವರ್ಲ್ಡ್ಗೆ ಮನವಿ ಮಾಡಿದ್ದಾರೆ.