ಬೆಂಗಳೂರು,ಮೇ29(Daijiworld News/AZM):ಕನ್ನಡ ಚಿತ್ರರಂಗಕ್ಕೆ ಸಚಿವ ಜಮೀರ್ ಅಹ್ಮದ್ ಪುತ್ರ ಜೈದ್ ಖಾನ್ ಎಂಟ್ರಿ ಕೊಡುತ್ತಿದ್ದಾರೆ. ಬಾಲಿವುಡ್ ನಲ್ಲೂ ಜೈದ್ ಖಾನ್ ಗೆ ಅತ್ಯುತ್ತಮ ನಂಟಿದ್ದರೂ ಕೂಡಾ, ಕನ್ನಡಿಗನಾದ ತಾನು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕೇನ್ನುವುದು ಜೈದ್ ಆಗ್ರಹ.
ಬಾಲಿವುಡ್ನ ಯಾವುದೇ ಹೀರೋಗಳಿಗೂ ಕಡಿಮೆ ಇಲ್ಲವೆಂಬಂತೆ ಹ್ಯಾಂಡ್ ಸಮ್ ಆಗಿರುವ ಜೈದ್ ಖಾನ್ ಸ್ಯಾಂಡಲ್ವುಡ್ ಪಾದರ್ಪಣೆಗೆ ಸಕಲ ಸಿದ್ಧತೆಯಲ್ಲಿದ್ದಾರೆ. ಈ ಹಿಂದೊಮ್ಮೆ ಹಿಂದಿ ಚಿತ್ರದಲ್ಲಿ ಜೈದ್ ಖಾನ್ ನಟಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಸದ್ಯದ ಮಾಹಿತಿ ಪ್ರಕಾರ ಕನ್ನಡ ನೆಲದಿಂದಲೇ ತನ್ನ ಸಿನಿ ಇನಿಂಗ್ಸ್ ಆರಂಭಿಸಲು ಯುವ ಹೀರೋ ಉತ್ಸುಕನಾಗಿದ್ದಾನೆ.
ಇದಕ್ಕಾಗಿ ಸಕಲ ಸಿದ್ಧತೆ ಮುಗಿಸಿರುವ ಜೈದ್ ಖಾನ್ಗಾಗಿ ಭರ್ಜರಿ ಸ್ಕ್ರಿಪ್ಟ್ವೊಂದು ರೆಡಿಯಾಗುತ್ತಿದೆ. ಇದಕ್ಕೆ ಸಾರಥ್ಯವಹಿಸಿರುವುದು 'ಬೆಲ್ಬಾಟಂ' ಚಿತ್ರ ಖ್ಯಾತಿಯ ನಿರ್ದೇಶಕ ಜಯತೀರ್ಥ. ಜೈದ್, ಸ್ಯಾಂಡಲ್ವುಡ್ನಲ್ಲೇ ತನ್ನ ಮೊದಲ ಚಿತ್ರ ಮೂಡಿ ಬರಬೇಕೆಂದು ಬಯಸಿದ್ದಾರೆ. ಹೀಗಾಗಿ ಅವರಿಗೆ ಹೋಲುವಂತಹ ಕಥೆಯೊಂದರ ಸಿದ್ಧತೆಯಲ್ಲಿದ್ದೇವೆ. ಈ ಚಿತ್ರದ ಕಥೆಯು ವಿಭಿನ್ನ ಲವ್ ಸ್ಟೋರಿ ಆಗಿರಲಿದ್ದು, ಆ ಕಥೆಗೆ ಹೊಂದುವಂತಹ ಲೊಕೇಶನ್ಗಳ ಹುಡುಕಾಟಕ್ಕಾಗಿ ಇತ್ತೀಚೆಗೆ ಕಾಶಿಗೆ ತೆರಳಿದ್ದೆ ಎಂದಿದ್ದಾರೆ ನಿರ್ದೇಶಕ ಜಯತೀರ್ಥ.
ತಾನು ಹುಟ್ಟಿ ಬೆಳೆದಿದ್ದು ಕರ್ನಾಟಕದಲ್ಲಿ. ತಾನು ಇಲ್ಲಿಯವನು. ಹೀಗಾಗಿ ಈ ನೆಲದಲ್ಲೇ ಸಿನಿ ಪಯಣದ ಮೊದಲ ಹೆಜ್ಜೆ ಕನ್ನಡದಿಂದ ಆರಂಭವಾಗಬೇಕು. ಈಗಾಗಲೇ 60 ನಿರ್ದೇಶಕರ ಕಥೆಗಳನ್ನು ಕೇಳಿದ್ದೇನೆ. ಆದರೆ ನನಗೆ ಜಯತೀರ್ಥರವರು ಹೇಳಿರುವ ಸ್ಟೋರಿ ಇಷ್ಟವಾಗಿದ್ದು, ಈ ಚಿತ್ರಕಥೆಯೊಂದಿಗೆ ಪಾದರ್ಪಣೆ ಮಾಡಲಿದ್ದೇನೆ ಎಂದು ಜೈದ್ ಖಾನ್ ಹೇಳಿದ್ದಾರೆ.
ಸದ್ಯ ಜೈದ್ ಕನ್ನಡ ಚಿತ್ರರಂಗದಲ್ಲೇ ಪಾದಾರ್ಪಣೆ ಮಾಡಬೇಕೆಂದು ನೆನೆಸುತ್ತಿದ್ದು, ಅವರ ಮೊದಲ ಚಿತ್ರಕ್ಕಾಗಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಅಂತೂ ಆಗಸ್ಟ್ ನಲ್ಲಿ ಸಿನಿಮಾದ ಸಂಪೂರ್ಣ ಮಾಹಿತಿ ಹೊರಬೀಳಲಿದೆ. ಬಣ್ಣದ ಲೋಕಕ್ಕೆ ಅದೃಷ್ಟ ಪರೀಕ್ಷೆಗೆ ಇಳಿದಿರುವ ಜೈದ್ ಖಾನ್ ಯಶಸ್ವಿಯತ್ತ ಸಾಗಲಿ ಎಂದು ಹಾರೈಸುವ.