ಉಡುಪಿ, ನ.26(DaijiworldNews/TA):ತಮಿಳು ಸಿನಿಕ್ಷೇತ್ರದ ಫೇಮಸ್ ಜೋಡಿ ಸೂರ್ಯ, ಜ್ಯೋತಿಕಾ ಉಡುಪಿ ಜಿಲ್ಲೆ ಬೈಂದೂರಿನ ಕೊಲ್ಲೂರಿಗೆ ಭೇಟಿ ನೀಡಿದ್ದಾರೆ. ಕೊಲ್ಲೂರು ಶ್ರೀ ಮೂಕಾಂಬಿಕಾ ಸನ್ನಿಧಿಗೆ ಸೂರ್ಯ, ಜ್ಯೋತಿಕಾ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಳ, ರಾಜ್ಯ ಹೊರ ರಾಜ್ಯದಲ್ಲೂ ಪ್ರಖ್ಯಾತವಾಗಿರುವ ಕ್ಷೇತ್ರ. ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಜನ ಭಕ್ತರು ಭೇಟಿ ಕೊಟ್ಟು ತಮ್ಮ ಇಷ್ಟಾರ್ಥಗಳು ನೆರವೇರುವಂತೆ ಕೋರಿ ಪ್ರಾರ್ಥನೆ ಸಲ್ಲಿಸುತ್ತಾರೆ. ಅದರಲ್ಲೂ ರಾಜ್ಯದ ಸಿನೆಮಾ ತಾರೆಯರು, ಸೆಲೆಬ್ರಿಟಿಗಳು, ರಾಜ್ಯದ ರಾಜಕಾರಣಿಗಳು ಇಲ್ಲಿಗೆ ಭೇಟಿ ನೀಡಿ ವಿಶೇಷ ಪೂಜೆ ಪುನಸ್ಕಾರದಲ್ಲಿ ಭಾಗಿಯಾಗುತ್ತಾ ಬಂದಿದ್ದಾರೆ.
ಸೂರ್ಯ, ಜ್ಯೋತಿಕಾ ದಂಪತಿ ದೇಗುಲದಲ್ಲಿ ವಿಶೇಷ ಚಂಡಿಕಾಯಾಗದಲ್ಲಿ ಭಾಗಿಯಾಗಿ, ಶಕ್ತಿ ದೇವತೆ ಮೂಕಾಂಬಿಕೆಗೆ ವಿಶೇಷ ಸೇವೆ ಸಲ್ಲಿಸಿ ತೆರಳಿದ್ದಾರೆ. ನೆಚ್ಚಿನ ಜೋಡಿ ಸೂರ್ಯ ದಂಪತಿ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ನ.14ರಂದು ಸೂರ್ಯ ನಟನೆಯ ‘ಕಂಗುವ’ ಸಿನಿಮಾ ರಿಲೀಸ್ ಆಗಿತ್ತು. ಸೂರ್ಯ ನಟನೆಗೆ ಉತ್ತಮ ರೆಸ್ಪಾನ್ಸ್ ಕೂಡಾ ಸಿಕ್ಕಿದೆ.