ಬೆಂಗಳೂರು, ಡಿ.07(DaijiworldNews/AA): ಬಾಲಿವುಡ್ ಬೆಡಗಿ, ಸ್ಟಾರ್ ನಟಿ ದೀಪಿಕಾ ಪಡುಕೋಣೆ ಅವರು ಖ್ಯಾತ ಗಾಯಕ ದಿಲ್ಜೀತ್ ದೊಸ್ಸಾಂಗ್ಗೆ ಕನ್ನಡ ಮಾತನಾಡಲು ಹೇಳಿಕೊಟ್ಟಿದ್ದಾರೆ.
ಇತ್ತೀಚೆಗಷ್ಟೆ ಹೆಣ್ಣು ಮಗುವಿಗೆ ತಾಯಿಯಾಗಿರುವ ದೀಪಿಕಾ ಪಡುಕೋಣೆ ಸದ್ಯ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಆದರೆ ಇದೀಗ ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಲೈವ್ ಕಾನ್ಸರ್ಟ್ನಲ್ಲಿ ಸರ್ಪ್ರೈಸ್ ಎಂಟ್ರಿ ನೀಡುವ ಜೊತೆಗೆ ದಿಲ್ಜೀತ್ ದೊಸ್ಸಾಂಗ್ಗೆ ಕನ್ನಡ ಸಹ ಹೇಳಿಕೊಟ್ಟಿದ್ದಾರೆ.
ಖ್ಯಾತ ಪಂಜಾಬಿ ಗಾಯಕ ದಿಲ್ಜೀತ್ ದೊಸ್ಸಾಂಜ್ ಭಾರತದ ಪ್ರಮುಖ ನಗರಗಳಲ್ಲಿ ಲೈವ್ ಕಾನ್ಸರ್ಟ್ ಗಳನ್ನ ನಡೆಸುತ್ತಾರೆ. ಸದ್ಯ ಭಾರತದಲ್ಲಿ 'ದಿಲ್ಲುಮಿನಾಟಿ' ಟೂರ್ ನಡೆಯುತ್ತಿದ್ದು, ಶುಕ್ರವಾರ ಬೆಂಗಳೂರಿನಲ್ಲಿ ದಿಲ್ಜೀತ್ರ ಅದ್ಧೂರಿ ಕಾನ್ಸರ್ಟ್ ನಡೆಯಿತು. ಈ ಕಾನ್ಸರ್ಟ್ಗೆ ಭಾರಿ ಸಂಖ್ಯೆಯ ಅಭಿಮಾನಿಗಳು ಸೇರಿದ್ದರು. ದಿಲ್ಜೀತ್, ತಮ್ಮ ಪ್ರತಿ ಕಾನ್ಸರ್ಟ್ನಲ್ಲಿ ಒಬ್ಬ ವಿಶೇಷ ಅತಿಥಿಯನ್ನು ವೇದಿಕೆಗೆ ಕರೆತರುತ್ತಾರೆ. ಇದೀಗ ಬೆಂಗಳೂರಿನಲ್ಲಿ ನಡೆದ ಶೋಗೆ ದಿಲ್ಜೀತ್ ದೊಸ್ಸಾಂಜ್ ದೀಪಿಕಾ ಪಡುಕೋಣೆ ಅವರನ್ನು ಸರ್ಪ್ರೈಸ್ ಅತಿಥಿಯಾಗಿ ಕರೆತಂದರು.
ವೇದಿಕೆಗೆ ಬಂದ ದೀಪಿಕಾ ಪಡುಕೋಣೆ ಅವರು ದಿಲ್ಜೀತ್ ದೊಸ್ಸಾಂಜ್ಗೆ ಕನ್ನಡ ಮಾತನಾಡಲು ಹೇಳಿಕೊಟ್ಟರು. ದೀಪಿಕಾ ಪಡುಕೋಣೆ, ವೇದಿಕೆಗೆ ಬಂದ ವೇಳೆ ಕನ್ನಡದಲ್ಲಿ ಮಾತನಾಡಲು ದಿಲ್ಜೀತ್ ಯತ್ನಿಸುತ್ತಾರೆ. ಆದರೆ ಅವರಿಗೆ ಸರಿಯಾಗಿ ಮಾತನಾಡಲು ಆಗದೇ ಇರುವಾಗ ದೀಪಿಕಾ ಪಡುಕೋಣೆ ಸಹಾಯ ಮಾಡುತ್ತಾರೆ. 'ನಾನು ನಿಮ್ಮನ್ನು ಪ್ರೀತಿಸ್ತೀನಿ' ಎಂದು ಕನ್ನಡದಲ್ಲಿ ಹೇಳಿಕೊಟ್ಟಿದ್ದು, ಅದರಂತೆ ದಿಲ್ಜೀತ್ ದೊಸ್ಸಾಂಜ್ ಸಹ ಹೇಳಿದ್ದಾರೆ.