ಹೈದರಾಬಾದ್,ಡಿ. 14(DaijiworldNews/TA): 'ಪುಷ್ಪಾ 2' ಪ್ರದರ್ಶನದ ವೇಳೆ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಒಬ್ಬ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಒಂದು ದಿನದ ನಂತರ ತೆಲುಗು ನಟ ಅಲ್ಲು ಅರ್ಜುನ್ ಶನಿವಾರ ಬೆಳಿಗ್ಗೆ ಜೈಲಿನಿಂದ ಬಿಡುಗಡೆಯಾದರು.
ಶುಕ್ರವಾರ ನಟನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದರು. ಬಳಿಕ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿತು. ಆದರೆ, ಸಂಜೆ ವೇಳೆಗೆ ತೆಲಂಗಾಣ ಹೈಕೋರ್ಟ್ ನಟನಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ನಿನ್ನೆ ತೆಲಂಗಾಣ ಹೈಕೋರ್ಟ್ನಿಂದ ಆದೇಶದ ಪ್ರತಿ ಪಡೆದರೂ ಜೈಲು ಅಧಿಕಾರಿಗಳು ಬಿಡುಗಡೆ ಮಾಡದ ಕಾರಣ ನಟನ ಬಂಧನವು "ಅಕ್ರಮ ಬಂಧನ" ಎಂದು ಅಲ್ಲು ಅರ್ಜುನ್ ಅವರ ವಕೀಲ ಅಶೋಕ್ ರೆಡ್ಡಿ ಹೇಳಿದ್ದಾರೆ.
ಒಂದು ದಿನ ಸಂಪೂರ್ಣವಾಗಿ ಬಂಧನದಲ್ಲಿ ಕಳೆದ ನಟ ಅಲ್ಲು ಅರ್ಜುನ್ ಶನಿವಾರ ಬಿಡುಗಡೆ ಹೊಂದಿದ್ದಾರೆ. ಅವರು ಬಿಗಿ ಭದ್ರತೆಯೊಂದಿಗೆ ತೆರಳಿದ್ದಾರೆ.