ಬೆಂಗಳೂರು, ಡಿ.16(DaijiworldNews/TA): ಆಕ್ಟರ್ ಡಾಲಿ ಧನಂಜಯ್ ಡಾಕ್ಟರ್ ಧನ್ಯತಾ ಇತ್ತೀಚೆಗೆ ಎಂಗೇಜ್ ಆಗಿದ್ದು ಮದುವೆ ಸಿದ್ಧತೆ ಭರದಿಂದ ಸಾಗುತ್ತಿದೆ. ಇದೀಗ ಸರಳ ಮದುವೆಯ ಆಮಂತ್ರಣ ಪತ್ರಿಕೆ ವೈರಲ್ ಆಗಿದೆ.
ಹೌದು ಸದ್ಯ ಸರಳ ಸುಂದರವಾದ ಮದುವೆ ಆಮಂತ್ರಣ ಪತ್ರಿಕೆ ವೈರಲ್ ಆಗುತ್ತಿದೆ. ಸ್ವತಃ ಧನಂಜಯ್ ಅದನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮದೇ ಹಸ್ತಾಕ್ಷರದಲ್ಲಿ ಎಲ್ಲರನ್ನೂ ಮದುವೆಗೆ ಆಹ್ವಾನಿಸಿದಂತೆ ಲಗ್ನ ಪತ್ರಿಕೆ ಡಿಸೈನ್ ಮಾಡಲಾಗಿದೆ.
"ನಿಮ್ ಪ್ರೀತಿಯ ಧನಂಜಯ ಹಾಗೂ ಧನ್ಯತಾ ಮಾಡುವ ನಮಸ್ಕಾರಗಳು. ನಾವು ಖುಷಿಯಾಗಿದ್ದೇವೆ. ನಮ್ಮ ವಿಷಯ ತಿಳಿದು ನೀವು ಸಂಭ್ರಮಿಸಿದ್ದು ನಮ್ಮ ಖುಷಿಯನ್ನು ಇಮ್ಮಡಿಗೊಳಿಸಿದೆ. ನಮ್ಮ ಮದುವೆ ಸಂಭ್ರಮವನ್ನು ನಿಮ್ಮೆಲ್ಲರ ಜೊತೆಗೂಡಿ ಆಚರಿಸಬೇಕು ಎಂಬ ಮಹದಾಸೆಯಿಂದ ಈ ಪತ್ರ ಬರೆಯುತ್ತಿದ್ದೇವೆ" ಎಂದು ಮದುವೆ ಆಮಂತ್ರಣ ಮಾಡಿದ್ದಾರೆ.
ತಾವು ಎಲ್ಲಿದ್ದರೂ ಜಗದ ಯಾವುದೇ ಮೂಲೆಯಲ್ಲಿ ಇದ್ದರೂ ಕುಟುಂಬ ಸಮೇತರಾಗಿ ಬಂದು ನಮ್ಮ ಸಮಾಗಮಕ್ಕೆ ನೀವು ಆಶೀರ್ವದಿಸಬೇಕು. ಪ್ರೇಮದ ಭರವಸೆಯೇ ಬಾಳಿನ ಬೆಳಕು. ನಮ್ಮ ಪ್ರೀತಿದೀಪದ ಪ್ರಕಾಶಕ್ಕೆ ಸಾಕ್ಷಿಯಾಗಬೇಕು ಎಂಬುದು ನಮ್ಮ ಆಶಯ, ಮತ್ತೆಲ್ಲಾ ಕ್ಷೇಮವಷ್ಟೇ. ನಿಮ್ಮನ್ನು ಸ್ವಾಗತಿಸುವ ನಿರೀಕ್ಷೆಯಲ್ಲಿ ಧನಂಜಯ ಹಾಗೂ ಧನ್ಯತಾ" ಎಂದು ಬರೆಯಲಾಗಿದೆ.
ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗದ ವಸ್ತು ಪ್ರದರ್ಶನ ಮೈದಾನದಲ್ಲಿ ಡಾಲಿ ಮದುವೆ ಮಂಟಪ ಸಿದ್ಧವಾಗಲಿದೆ. ಫೆಬ್ರವರಿ 15ರಂದು ಸಂಜೆ 6 ಗಂಟೆಗೆ ಮದುವೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಮರುದಿನ ಬೆಳಗ್ಗೆ 8-20ರಿಂದ 10 ಗಂಟೆವರೆಗಿನ ಶುಭ ಮುಹೂರ್ತದಲ್ಲಿ ಮಾಂಗಲ್ಯಧಾರಣೆ ನಡೆಯಲಿದೆ. ಈ ಅದ್ಧೂರಿ ಮದುವೆ ಸಮಾರಂಭದಲ್ಲಿ ಚಿತ್ರರಂಗದ ತಾರೆಯರು ಸಾಕ್ಷಿ ಆಗಲಿದ್ದಾರೆ ಎನ್ನಲಾಗಿದೆ.