ಮುಂಬೈ, ಡಿ.17(DaijiworldNews/AA): ತೆಲುಗಿನ ಸ್ಟಾರ್ ನಟ ಪ್ರಭಾಸ್ ಅವರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಬಾಲಿವುಡ್ ನಟಿ ಮೃಣಾಲ್ ಠಾಕೂರ್ ನೋ ಹೇಳಿದ್ದಾರೆ. ಆದರೆ ಇದಕ್ಕೆ ಕಾರಣ ಪ್ರಭಾಸ್ ಅಲ್ಲ. ಬದಲಿಗೆ ಈ ಸಿನಿಮಾದ ನಿರ್ದೇಶಕ.
ಪ್ರಭಾಸ್ಗೆ ನಾಯಕಿಯಾಗಿ ನಟಿಸಲು ಅನೇಕ ನಟಿಯರು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ನಟಿ ಮೃಣಾಲ್ ಠಾಕೂರ್ ತಮಗೆ ದೊರೆತ ಅವಕಾಶವನ್ನು ತಳ್ಳಿ ಹಾಕಿದ್ದಾರೆ. ಅದಕ್ಕೆ ಕಾರಣ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ.
ಪ್ರಭಾಸ್, 'ಸ್ಪಿರಿಟ್' ಎಂಬ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾವನ್ನು 'ಅರ್ಜುನ್ ರೆಡ್ಡಿ', 'ಅನಿಮಲ್' ಸಿನಿಮಾಗಳನ್ನು ನಿರ್ದೇಶಿಸಿದ ಸಂದೀಪ್ ರೆಡ್ಡಿ ಅವರು ನಿರ್ದೇಶಿಸಲಿದ್ದಾರೆ. ಸಂದೀಪ್ ಅವರ ನಿರ್ದೇಶನ ಶೈಲಿಯ ಬಗ್ಗೆ ಹಲವಾರು ಟೀಕೆಗಳು ಈ ಹಿಂದೆ ವ್ಯಕ್ತವಾಗಿವೆ. ಸಂದೀಪ್, ತಮ್ಮ ಸಿನಿಮಾಗಳಲ್ಲಿ ಅನವಶ್ಯಕ ಹಿಂಸೆಯನ್ನು ಪ್ರದರ್ಶಿಸುತ್ತಾರೆ. ನಾಯಕಿಯರನ್ನು ನಾಯಕನ ಅಡಿಯಾಳಿನಂತೆ, ಸೇವಕಿಯಂತೆ ತೋರಿಸುತ್ತಾರೆ ಎಂಬ ದೂರಿದೆ. 'ಅನಿಮಲ್' ಸಿನಿಮಾದಲ್ಲಿ ರಶ್ಮಿಕಾ ಪಾತ್ರವನ್ನು ಹೀಗೆಯೇ ಚಿತ್ರಿಸಲಾಗಿತ್ತು. ಹೀಗಾಗಿಯೇ ಮೃಣಾಲ್ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಚಿತ್ರದಲ್ಲಿ ನಟಿಸುವುದಿಲ್ಲ ಎಂದಿದ್ದಾರೆ.
'ಸ್ಪಿರಿಟ್' ಸಿನಿಮಾಕ್ಕೆ ಮೃಣಾಲ್ ಠಾಕೂರ್ ನಾಯಕಿಯಾಗಿ ಆಯ್ಕೆ ಆಗಿದ್ದರು. ಈ ಸಿನಿಮಾವು ಅನಿವಾರ್ಯ ಕಾರಣಕ್ಕೆ ತನ್ನ ಪೊಲೀಸ್ ಹುದ್ದೆ ಕಳೆದುಕೊಂಡಿರುವ ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ಕತೆಯನ್ನು ಹೊಂದಿದೆ. ಪ್ರಭಾಸ್ ಮಡದಿಯ ಪಾತ್ರಕ್ಕೆ ಮೃಣಾಲ್ ಠಾಕೂರ್ ಅನ್ನು ಆಯ್ಕೆ ಮಾಡಲಾಗಿತ್ತು. ಆದರೆ ಇದೀಗ ಮೃಣಾಲ್ ಅವರು ಈ ಸಿನಿಮಾವನ್ನು ನಿರ್ದೇಶಕರ ಕಾರಣದಿಂದ ರಿಜೆಕ್ಟ್ ಮಾಡಿದ್ದಾರೆ.